ಹೆಬ್ಬಾಲೆ: ಪರಿಸರ ಜಾಗೃತಿ ಆಂದೋಲನ
ಕುಶಾಲನಗರ, ಅ.17: ವಿದ್ಯಾರ್ಥಿಗಳು ನೆಲ, ಜಲ, ಪರಿಸರ, ಜೀವ ವೈವಿಧ್ಯ, ಅಂತರ್ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಹಾಗೂ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಪರಿಸರ ಮಿತ್ರ ಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್ ಹೇಳಿದರು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಪ್ರಯುಕ್ತ ಏರ್ಪಡಿಸಿದ ಪರಿಸರ ಜಾಗೃತಿ ಆಂದೋಲನದಲ್ಲಿ ಉಪನ್ಯಾಸ ನೀಡಿದರು.
ಜಲಮೂಲಗಳು ಮಾಲಿನ್ಯವಾಗದಂತೆ ಕಾಪಾಡಬೇಕಿದೆ. ಜಾಗತಿಕ ಮಟ್ಟದಲ್ಲಿ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ನೀರಿನ ಸಮಸ್ಯೆಯಿಂದ ಭವಿಷ್ಯತ್ತಿನಲ್ಲಿ ನೀರಿಗಾಗಿ ಯುದ್ಧ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಆತಂಕಪಟ್ಟರು. ಜಾಗತಿಕ ತಾಪಮಾನದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸ್ಲೈಡ್ ಪ್ರದರ್ಶನದ ಮೂಲಕ ಮಾಹಿತಿ ನೀಡಿದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ ಅವರು ಮಾತನಾಡಿ, ಶಿಬಿರಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸೆಸ್ಕ್‌ನ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಎಲ್.ರಾಮಪ್ಪ ಮಾತನಾಡಿ, ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಬೆಳೆಸುವುದರೊಂದಿಗೆ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಜಿ. ಕುಮಾರ್, ಹೆಬ್ಬಾಲೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ, ಗ್ರಾಪಂ ಸದಸ್ಯ ಮಧುಸೂದನ್ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಕೆ.ಎಸ್. ರುದ್ರಪ್ಪ, ಶಿಬಿರಾಧಿಕಾರಿ ಚನ್ನಕೇಶವ ಮೂರ್ತಿ, ಉಪನ್ಯಾಸಕರಾದ ಬಸವರಾಜ್, ರಶ್ಮಿ, ರಾಜಶೇಖರ್ ಇದ್ದರು. ಪಲ್ಲವಿ ಸ್ವಾಗತಿಸಿದರು.
ಸೂರ್ಯ ವಂದಿಸಿದರು. ರಂಜಿತಾ ನಿರೂಪಿಸಿದರು.