ಕೇಂದ್ರದ ಬೆಳೆ ವಿಮೆ ಮಾರ್ಗಸೂಚಿ ರೈತರ ಪರವಾಗಿಲ್ಲ: ರೈತ ಸಂಘ
ಶಿವಮೊಗ್ಗ, ಅ. 17: ಬರಗಾಲದ ಹಿನ್ನೆಲೆಯಲ್ಲಿ ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ನ.1 ರಿಂದ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಬೆಳೆ ವಿಮೆ ಮಾರ್ಗಸೂಚಿ ಬದಲಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ - ರಾಜ್ಯ ಸರಕಾರಗಳನ್ನು ಒತ್ತಾಯಿಸಿ, ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಏಳರಲ್ಲಿ, ಆರು ತಾಲೂಕುಗಳನ್ನು ಸರಕಾರ ಬರಪೀಡಿತವೆಂದು ಘೋಷಿಸಿದೆ. ಭದ್ರಾವತಿ ತಾಲೂಕನ್ನೂ ಸಹ ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಬರ ಪೀಡಿತ ಘೋಷಣೆಗೆ ಅನುಸರಿಸುತ್ತಿರುವ ಹಳೇಯ ಮಾರ್ಗಸೂಚಿಯನ್ನು ಮಾರ್ಪಡಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರ ಪರವಾಗಿ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬೆಳೆ ವಿಮೆ ಮಾರ್ಗಸೂಚಿ ರೈತರ ಪರವಾಗಿಲ್ಲ. ಈಗಿನ ಮಾರ್ಗಸೂಚಿ ಪ್ರಕಾರ ವಿಮೆಯ ಹಣ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಈ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಬದಲಾಯಿಸಿ ಒಂದು ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರಕೊಡುವಂತೆ ಕ್ರಮಕೈಗೊಳ್ಳಬೇಕು. ಜೊತೆಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ತುಂಗಾ ಏತ ನೀರಾವರಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಗುತ್ತಿಗೆ ಒಪ್ಪಂದದ ಪ್ರಕಾರ 2015 ರ ಆಗಸ್ಟ್‌ನಲ್ಲಿ ಈ ಯೋಜನೆ ಮುಗಿದು ನೀರು ಹರಿಸಬೇಕಿತ್ತು. ಆದರೆ, ಇಲ್ಲಿಯವರೆಗೆ ಮುಕ್ತಾಯ ವಾಗದೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಆದರೂ ಕಾಮಗಾರಿಯ ಮೊತ್ತವನ್ನು ನವೀಕರಿಸಿ ಬಿಲ್ ಚುಕ್ತಾ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಹೊರದೇಶದಿಂದ ಬರುವ ಅಡಿಕೆ ಆಮದನ್ನು ನಿಲ್ಲಿಸಬೇಕು. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಸರಕಾರ ಕೆಂಪು ಅಡಿಕೆಗೆ ಕ್ವಿಂಟಾಲ್‌ಗೆ 40 ಸಾವಿರ ರೂ., ಚಾಲಿ ಅಡಿಕೆಗೆ 30 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು. ಗೊಂದಿ ನಾಲಾ ಆಧುನೀಕರಣವನ್ನು ತ್ವರಿತವಾಗಿ ಮಾಡಬೇಕು. ಕುಮದ್ವತಿ ನದಿಯಿಂದ ತಾಳಗುಂದ, ಉಡುಗಣಿ, ಹೊಸೂರು ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಮುಖಂಡರಾದ ಡಾ. ಬಿ. ಎಂ. ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಹಿಟ್ಟೂರು ರಾಜು, ಅರಬಿಳಚಿ ಈಶಣ್ಣ, ಟಿ.ಎಂ.ಚಂದ್ರಪ್ಪ, ಎಸ್. ಶಿವಮೂರ್ತಿ, ಇ.ಬಿ. ಜಗದೀಶ್, ಎಚ್.ಇ. ರುದ್ರೇಶ್, ಡಿ.ಎಚ್. ರಾಮಚಂದ್ರಪ್ಪ, ಜಿ.ಎನ್. ಮತ್ತಿತರರು ಉಪಸ್ಥಿತರಿದ್ದರು.