ಪ್ರಜಾಪ್ರಭುತ್ವ ವ್ಯವಸ್ಥೆ ದಾರಿ ತತಪ್ಪುತ್ತಿದೆ: ವಿಶ್ರಾಂತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ
ತೀರ್ಥಹಳ್ಳಿ,ಅ.17: ಸಂಪೂರ್ಣ ವೌಲ್ಯದ ಕುಸಿತದಿಂದ ನಮ್ಮ ಪ್ರಮುಖ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದಾರಿತಪ್ಪುತ್ತಿವೆೆ. ಮನುಷ್ಯನಲ್ಲಿ ತೃಪ್ತಿ, ಮಾನವೀಯತೆ ದೂರವಾಗಿದ್ದು, ದುರಾಸೆ ಹೆಚ್ಚಾಗಿದೆ. ದುರಾಸೆಯ ಮಟ್ಟ ಮಿತಿಮೀರಿ ಮಾನವೀಯತೆ ನಮ್ಮಿಂದ ದೂರವಾಗಿರುವುದು ವ್ಯವಸ್ಥೆಯ ದುರಂತ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ವಿಶ್ರಾಂತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಸಿಯುತ್ತಿರುವ ಸಾಮಾಜಿಕ ವೌಲ್ಯಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಯುವ ಪೀಳಿಗೆ ಜಾಗೃತರಾಗಬೇಕು. ತೃಪ್ತಿ ಹಾಗೂ ಮಾನವೀಯತೆಯ ವೌಲ್ಯಗಳನ್ನು ಯುವ ಪೀಳಿಗೆ ಬೆಳೆಸಿಕೊಂಡಾಗ ಮಾತ್ರ ದೇಶದ ಉಜ್ವಲ ಭವಿಷ್ಯವನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು. ಮನುಷ್ಯರು ದುರಾಸೆಗೆ ಇಳಿಯದೆ ಜಾಗೃತರಾಗಬೇಕು ಎಂಬ ಮಾತನ್ನು ಎಷ್ಟೇ ಹೇಳಿದರೂ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿಲ್ಲ. ರೂಪಾಯಿ ಆಣೆ ಎಂಬುದು ವೌಲ್ಯದ ಅರ್ಥವಲ್ಲ. ಮಾನವೀಯತೆಯನ್ನು ಮರೆತು ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂದರು.
ಪ್ರಜಾಪ್ರಭುತ್ವ ಎಂಬುದು ಪ್ರತಿಯೊಬ್ಬ ಭಾರತೀಯನ ಹಕ್ಕು ಎಂದು ಹೇಳಿದ ಡಾ. ಅಂಬೇಡ್ಕರ್‌ರವರ ಮಾತು ಕೇವಲ ಮಾತಾಗಿ ಉಳಿದಿದೆ. ಅಂತಾರಾಷ್ಟ್ರೀಯ ಮಟ್ಟದ ರಾಜನೀತಿಯೇ ಪ್ರಜಾಪ್ರಭುತ್ವ. ಹಿರಿಯರು ಹೇಳಿದ ರಾಜನೀತಿಯನ್ನು ನಾವು ಪ್ರಜಾಪ್ರಭುತ್ವವೆಂದು ಅರಿತೆವು. ಆದರಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪ್ರಜಾಪ್ರಭುತ್ವದ ವೌಲ್ಯ ಕುಸಿದು ಆಡಳಿತಕ್ಕೆ ಕುಂದು ಬಂದಿದೆ ಎಂದರು.
ಈ ದೇಶದಲ್ಲಿ ಯಾವುದೇ ಕ್ರಾಂತಿಯಿಂದ ಬದಲಾವಣೆ ಸಾಧ್ಯವಿಲ್ಲ. ಅಮಾಯಕರಿಂದು ನಿರಂತರವಾಗಿ ಶಿಕ್ಷೆಗೆ ಒಳಪಡುತ್ತಿದ್ದಾರೆ. ಭ್ರಷ್ಟಾಚಾರವನ್ನು ಹುಟ್ಟಿಸಿದ್ದು ಸೃಷ್ಟಿಕರ್ತ. ನಮ್ಮ ಮುಂದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಉತ್ತಮ ಸಮಾಜವನ್ನು ಕಟ್ಟಿ ಅನ್ಯಾಯವನ್ನು ಮೆಟ್ಟಿ ಮಾನವೀಯತೆ ಹಾಗೂ ತೃಪ್ತಿಯೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ವಿದ್ಯಾರ್ಥಿ ಸಮೂಹ ವ್ಯವಸ್ಥೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸಕ ಕಿಮ್ಮನೆ ರತ್ನಾಕರ, ರಾಜ್ಯದ ಆರ್ಥಿಕತೆ ಹಾಗೂ ಸದನಗಳಲ್ಲಿ ನಡೆಯುವ ಬಜೆಟ್‌ಗಳ ಬಗ್ಗೆ ನಮ್ಮ ಜನಪ್ರತಿನಿಧಿಗಳು ಅಧ್ಯಯನ ಹಾಗೂ ಚರ್ಚೆ ಮಾಡುವ ಅಗತ್ಯವಿದೆ. ಆದರೆ, ಈ ದೇಶದ ಶೇ.50ರಷ್ಟು ಸಂಸದರು ಹಾಗೂ ಶಾಸಕರಿಗೆ ಬಜೆಟ್‌ನ ಸಂಪೂರ್ಣ ಮಾಹಿತಿಯೇ ಇರುವುದಿಲ್ಲ ಎಂದರು.
ಬದಲಾವಣೆಯ ಪರ್ವತದ ಅಗತ್ಯ ನಮಗಿಂದು ಬೇಕಾಗಿದ್ದು, ಸಮಾಜದ ಸೈದ್ಧಾಂತಿಕ ನಿಲುವುಗಳನ್ನು ಅರಿತುಕೊಳ್ಳಲು ಯುವ ಪೀಳಿಗೆ ಇಂದು ಬುದ್ಧ, ಗಾಂಧಿ, ಅಂಬೇಡ್ಕರ್, ಲೋಹಿಯಾರವರ ಪುಸ್ತಕಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಕೂಳೂರು ಸತ್ಯನಾರಾಯಣರಾವ್, ಕಾಲೇಜು ಪ್ರಾಚಾರ್ಯ ದೇವರಾಜ್, ಉಪನ್ಯಾಸಕ ಡಾ. ಎ.ಸಿ.ನಾಗೇಶ್, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ರ್ಯಾಂಕ್ ವಿಜೇತ ವಿದ್ಯಾರ್ಥಿನಿಯರಾದ ಸ್ವಾತಿ ಕೆ.ಎಂ., ವಿಜಯಾ ಹಾಗೂ ಸ್ವಾತಿ ಎಚ್.ಆರ್. ರನ್ನು ಸನ್ಮಾನಿಸಲಾಯಿತು. ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಸಪ್ರದ ಕಾಲೇಜಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಡಾ. ಸಂತೊೀಷ್ ಹೆಗ್ಡೆ ಮಾತನಾಡಿದರು.