×
Ad

ಅನುಷ್ಠಾನವಾಗದ ಅರಣ್ಯ ಹಕ್ಕು ಕಾಯ್ದೆ

Update: 2016-10-17 22:20 IST

ಶಿವಮೊಗ್ಗ, ಅ. 17: ‘ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಮತ್ತು 2008’ ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ತಕ್ಷಣವೇ ಕಾಯ್ದೆಯಡಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ನಡೆಸಬೇಕು ಎಂದು ಆಗ್ರಹಿಸಿ, ಸೋಮವಾರ ಜಿಲ್ಲಾ ಕಾಂಗ್ರೆಸ್ ಪಕ್ಷವು ನಗರದ ಡಿ.ಸಿ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. 

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಹೆಚ್ಚಿದೆ. ಈ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಸ್ಥಳೀಯ ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ತ್ವರಿತಗತಿಯಲ್ಲಿ, ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಹಲವು ಬಾರಿ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಸಭೆಗಳಲ್ಲಿಯೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆದರೂ ಅಧಿಕಾರಿಗಳು ಕಾಯ್ದೆಯಡಿ ಅರ್ಜಿಗಳ ಸಮರ್ಪಕ ವಿಲೇವಾರಿ ಮಾಡುತ್ತಿಲ್ಲ. ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಅರಣ್ಯ ಹಕ್ಕು ಸಮಿತಿಗಳು ಪ್ರಕರಣಗಳನ್ನು ಇತ್ಯರ್ಥಗೊಳಿಸುವಾಗ ಮೂರು ತಲೆಮಾರಿನಿಂದ ವಾಸಿಸುತ್ತಿರುವವರ ಬಗ್ಗೆ ಸ್ಥಳೀಯ ಹಿರಿಯರಿಂದ ಹೇಳಿಕೆ ಪಡೆಯಬಹುದಾಗಿದೆ. ಅರಣ್ಯ ಹಕ್ಕು ಕಾಯ್ದೆಯ ನಿಯಮ 2008ರ ಪ್ರಕರಣ 13 ರಲ್ಲಿ ನಿಗದಿಪಡಿಸಿರುವ ದಾಖಲೆಗಳಲ್ಲಿ ಯಾವುದಾರೊಂದನ್ನು ಪರಿಗಣಿಸಲು ಸರಕಾರ ಸೂಚಿಸಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಗ್ರಾಮಮಟ್ಟದ ಅರಣ್ಯ ಹಕ್ಕು ಸಮಿತಿ ಮತ್ತು ಉಪವಿಭಾಗದ ಅರಣ್ಯ ಹಕ್ಕು ಸಮಿತಿ, ಜಿಲ್ಲಾ ಮಟ್ಟದ ಸಮಿತಿ ಕಡ್ಡಾಯವಾಗಿ ವಾರಕ್ಕೊಮ್ಮೆ ಸಭೆ ಸೇರಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಲು ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ.ಶ್ರೀನಿವಾಸ್, ಮುಖಂಡರಾದ ವೈ.ಎಚ್. ನಾಗರಾವ್, ರಾಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News