ಉಡುಗೊರೆ ಸ್ವೀಕರಿಸಲು ಸಿಎಂ ನಕಾರ
ಬೆಂಗಳೂರು, ಅ.18: ರೇಶ್ಮೆ ಹಾಗೂ ಪಶುಸಂಗೋಪನೆ ಸಚಿವ ಎ.ಮಂಜು ನೀಡಿದ್ದಂತಹ ರೇಶ್ಮೆ ಜುಬ್ಬಾಗಳಿರುವ ಉಡುಗೊರೆ ಪ್ಯಾಕೇಟ್‌ನ್ನು ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ರೇಶ್ಮೆ ಹಾಗೂ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಗೆ ಮುಖ್ಯಮಂತ್ರಿ ಆಗಮಿಸಿದ್ದ ವೇಳೆ ಈ ಸಂಗತಿ ಜರುಗಿತು.
ಉಡುಗೊರೆಯ ಪ್ಯಾಕೇಟ್‌ನ್ನು ಎ.ಮಂಜು, ಮುಖ್ಯಮಂತ್ರಿಗೆ ನೀಡುತ್ತಿದ್ದಂತೆ ಅದರಲ್ಲೇನಿದೆ ಎಂದು ಅವರು ವಿಚಾರಿಸಿದರು. ರೇಶ್ಮೆ ಜುಬ್ಬಾಗಳಿರುವುದಾಗಿ ಮಂಜು ಉತ್ತರಿಸಿದರು. ನಾನು ರೇಶ್ಮೆ ಜುಬ್ಬಾಗಳನ್ನು ಧರಿಸುವುದಿಲ್ಲ. ಆದುದರಿಂದ, ಈ ಉಡುಗೊರೆ ಬೇಡ ಎಂದು ಪ್ಯಾಕೇಟ್‌ನ್ನು ಸಿದ್ದರಾಮಯ್ಯ ಹಿಂದಿರುಗಿಸಿದರು. ಈ ಹಿಂದೆ ಸಿದ್ದರಾಮಯ್ಯ ದುಬಾರಿ ವಾಚೊಂದನ್ನು ಉಡುಗೊರೆಯಾಗಿ ಪಡೆದ ಪ್ರಕರಣವು ಭಾರೀ ವಿವಾದವನ್ನು ಸೃಷ್ಟಿಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.
22 ಕೋಟಿ ರೂ.ಮರುಪಾವತಿ: ರಾಜ್ಯ ರೇಶ್ಮೆ ಕೈಗಾರಿಕಾ ನಿಗಮದಲ್ಲಿ ಸರಕಾರ ತೊಡಗಿಸಿದ್ದ 22 ಕೋಟಿ ರೂ.ಗಳನ್ನು ನಿಗಮವು ಮರುಪಾವತಿ ಮಾಡಿದೆ. ಈ ವಿಮೋಚನಾ ಷೇರು ಬಂಡವಾಳದ 22 ಕೋಟಿ ರೂ.ಗಳ ಚೆಕ್ಕನ್ನು ರೇಶ್ಮೆ ಹಾಗೂ ಪಶುಸಂಗೋಪನೆ ಸಚಿವ ಎ.ಮಂಜು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ರೇಶ್ಮೆ ಕೈಗಾರಿಕಾ ನಿಗಮದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.