×
Ad

ಕ್ಷೇತ್ರಾಭಿವೃದ್ಧಿ ಜನಪ್ರತಿನಿಧಿಗಳ ಕರ್ತವ್ಯ: ಜಿಪಂ ಸದಸ್ಯ ರಾಜಶೇಖರ

Update: 2016-10-18 22:51 IST

ಸಾಗರ, ಅ.18: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ, ಪಕ್ಷ ಇರುತ್ತದೆ. ಆದರೆ ಚುನಾವಣೆ ನಂತರ ಕ್ಷೇತ್ರದ ಪರಿಪೂರ್ಣ ಅಭಿವೃದ್ಧಿ ಮಾಡುವುದು ಚುನಾಯಿತ ಪ್ರತಿನಿಧಿಯ ಕರ್ತವ್ಯವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ ಅಭಿಪ್ರಾಯಿಸಿದರು. ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಯಳ್ಳಿ-ಭೀಮೇಶ್ವರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ತಾಳಗುಪ್ಪ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಭಾರಂಗಿ ಭಾಗ ಹಿಂದಿನಿಂದಲೂ ತೀವ್ರ ನಿರ್ಲಕ್ಷಕ್ಕೊಳಪಟ್ಟಿದೆ. ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಹಂತಹಂತವಾಗಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ. ಈ ಭಾಗದ ಗ್ರಾಮಸ್ಥರು ಸಹ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ ಎಂದರು. ಸಂಪರ್ಕ ರಸ್ತೆ ಇಲ್ಲದೆ ಇರುವುದರಿಂದ ಜನರು ತೀವ್ರ ಸಮಸ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಜೊತೆಗೆ ಕಡಕೋಡು ಜೈನಬಸದಿಯ ಕೆರೆ ಅಭಿವೃದ್ಧಿಗಾಗಿ 3 ಲಕ್ಷ ರೂ., ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧ್ದಿ, ಶಾಸಕರ ಅನುದಾನದಲ್ಲಿ ರಸ್ತೆ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ಗ್ರಾಮಸ್ಥರು ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿಕೊಳ್ಳಬಹುದು. ಪಡಿತರಚೀಟಿ ಅವ್ಯವಸ್ಥೆ ಬಗ್ಗೆ, ಟೋಕನ್ ತೆಗೆದುಕೊಂಡು ಪಡಿತರ ಪಡೆಯಲು ಗ್ರಾಮಸ್ಥರು ಅನುಭವಿಸುತ್ತಿರುವ ಪರದಾಟದ ಬಗ್ಗೆ ಈಗಾಗಲೇ ಪ್ರತಿಭಟನೆ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಸರಕಾರ ಗ್ರಾಮೀಣ ಭಾಗದ ಜನರಿಗೆ ಪಡಿತರ ಪಡೆಯಲು ಜಾರಿಗೆ ತಂದಿರುವ ಟೋಕನ್ ವ್ಯವಸ್ಥೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಗ್ರಾಪಂ ಉಪಾಧ್ಯಕ್ಷ ಗಣಪತಿ, ಕೋಮನಕುರಿ ಹಾಲಪ್ಪ, ದುರ್ಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉದ್ಯೋಗ ಮಾರುಕಟ್ಟೆಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News