ಸ್ಪರ್ಧೆ ಎದುರಿಸಲು ಸಿದ್ಧತೆ ಅಗತ್ಯ: ಡಿಸಿ
ಕಾರವಾರ, ಅ.18: ಸೂಕ್ತ ಉದ್ಯೋಗ ಗಿಟ್ಟಿಸಲು ಉದ್ಯೋಗ ಮಾರುಕಟ್ಟೆಯಲ್ಲಿ ವಿಪರೀತ ಸ್ಪರ್ಧೆಯಿದ್ದು ಕಠಿಣ ಪರಿಶ್ರಮ ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸಿದ್ಧತೆ ನಡೆಸಿದರೆ ಉದ್ಯೋಗ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ನವೆಂಬರ್ 12ಮತ್ತು 13ರಂದು ಕಾರವಾರದಲ್ಲಿ ನಡೆಯಲಿರುವ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಬುಧವಾರ ಕಾರವಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಓರಿಯೆಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಪ್ರತೀ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಅಭ್ಯರ್ಥಿಗಳು ತೆರೆದ ಮನಸ್ಸು ಹೊಂದಿದ್ದು ದೂರದ ಊರುಗಳಲ್ಲಿ ಕೆಲಸ ಮಾಡಲು ಸನ್ನದ್ಧರಾಗಿರಬೇಕು. ಹೊಸ ಸವಾಲುಗಳನ್ನು ಎದುರಿಸಲು, ಉದ್ಯೋಗ ಮಾರುಕಟ್ಟೆಯ ಏರಿಳಿತಗಳನ್ನು ಮತ್ತು ವಸ್ತುಸ್ಥಿತಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಕೇವಲ ಶೈಕ್ಷಣಿಕ ಹಿನ್ನೆಲೆ ಇದ್ದರೆ ಮಾತ್ರ ಸಾಲದು. ಉತ್ತಮ ಅಂಕಗಳು ಮಾತ್ರ ಉದ್ಯೋಗವನ್ನು ದೊರಕಿಸಿ ಕೊಡದು. ಉತ್ತಮ ವ್ಯಕ್ತಿತ್ವ, ನಿರ್ವಹಣಾ ಕೌಶಲ್ಯ, ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು.
ಕಾರವಾರ ಉದ್ಯೋಗ ಮೇಳದ ಮೂಲಕ ಯಾವುದೇ ಅಭ್ಯರ್ಥಿಗಳಿಗೆ ಉದ್ಯೋಗ ಖಾತ್ರಿ ಯನ್ನು ಜಿಲ್ಲಾಡಳಿತ ನೀಡುವುದಿಲ್ಲ. ಉದ್ಯೋಗಿಗಳ ಅಗತ್ಯವಿರುವ ಕಂಪೆನಿಗಳನ್ನು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ತೆರೆದಿಡುವ ಕಾರ್ಯವನ್ನು ಉದ್ಯೋಗ ಮೇಳದ ಮೂಲಕ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಪಂ ಮುಖ್ಯ ಸಿಇಒ ಚಂದ್ರಶೇಖರ ನಾಯಕ್ ಮಾತನಾಡಿ, ಓರಿಯೆಂಟೇಶನ್ ಕಾರ್ಯಕ್ರಮದ ಮೂಲಕ ಉದ್ಯೋಗ ಮೇಳವನ್ನು ಎದುರಿಸಲು ಅಭ್ಯರ್ಥಿಗಳಿಗೆ ಟಿಪ್ಸ್ ನೀಡಲಾಗುತ್ತಿದೆ. ಉತ್ತಮ ವ್ಯಕ್ತಿತ್ವ ರೂಪಿಸಲು, ಮಾರುಕಟ್ಟೆ ಅಗತ್ಯಗಳನ್ನು ಅರಿಯಲು ಸಹಕಾರಿಯಾಗಲಿದೆ. ತಾವು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯೋಗ ಮೇಳದ ನೋಡಲ್ ಅಧಿಕಾರಿ ಸದಾಶಿವ ಪ್ರಭು, ಪ್ರಸ್ತುತ 100ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿವೆ. 8ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸಹ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿದ್ದಾರೆ. ಕಾರವಾರ ತಾಲೂಕಿನಿಂದ 3,445 ಅಭ್ಯರ್ಥಿಗಳು ಹೆಸರು ದಾಖಲಿಸಿದ್ದಾರೆ. ಪ್ರಥಮ ಹಂತದಲ್ಲಿ ಕಾರವಾರ ತಾಲೂಕಿನ ಅಭ್ಯರ್ಥಿಗಳಿಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತರ ತಾಲೂಕಿನ ಅಭ್ಯರ್ಥಿಗಳಿಗೂ ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಐಎಎಸ್ ಪ್ರೊಬೆಷನರಿ ಅಧಿಕಾರಿ ಫೌಝಿಯಾ ತರನ್ನಮ್ ಮಾತನಾಡಿ, ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲೆ ಶಾಂತಲಾ, ಸಮನ್ವಯ ಅಧಿಕಾರಿ ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು. ಕಾರವಾರ ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ ವಂದಿಸಿದರು.