×
Ad

ಬಗರ್‌ಹುಕುಂ ಸಾಗುವಳಿ ತೆರವುಗೊಳಿಸುವ ಕಾರ್ಯಾಚರಣೆ

Update: 2016-10-18 22:54 IST

ಸೊರಬ, ಅ.18: ಮಂಗಳವಾರ ಬೆಳ್ಳಂಬೆಳಗ್ಗೆ ಪಟ್ಟಣಕ್ಕೆ ಹೊಂದಿಕೊಂಡಿರುವ ಕಾನಕೇರಿ ಬಡಾವಣೆಯ ಎಸ್.ಬಂಗಾರಪ್ಪಕ್ರೀಡಾಂಗಣದ ಹಿಂಭಾಗದ ಕೆಲ ಬಗರ್ ಹುಕುಂ ಸಾಗುವಳಿದಾರರಿಗೆ ಜೆಸಿಬಿಗಳ ಘರ್ಜನೆಯಿಂದ ಸಿಡಿಲು ಬಡಿದ ಅನುಭವ ಕಾದಿತ್ತು. ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ರಕ್ಷಣಾ ಇಲಾಖೆಯ ಸಿಬ್ಬಂದಿಯೊಂದಿಗೆ ರೈತರ ಜಮೀನಿಗೆ ಲಗ್ಗೆಯಿಡುತ್ತಿದ್ದಂತೆ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ರೈತರ ಆಕ್ರಂದನ ಮುಗಿಲು ಮುಟ್ಟಿತ್ತು. ರೈತರು ಯಾವುದೇ ಅಳಲನ್ನು ತೋಡಿಕೊಂಡರೂ ಬಿಗಿ ರಕ್ಷಣೆಯೊಂದಿಗೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಗಡಿ ಗುರುತಿಸಿ ಜೆಸಿಬಿಗಳಿಗೆ ಕೆಲಸ ಕೊಟ್ಟು ತೆರವು ಕಾರ್ಯಾಚರಣೆಗೆ ಮುಂದಾದ ಘಟನೆ ನಡೆಯಿತು. ಕಾರ್ಯಾಚರಣೆಯಲ್ಲಿ ಶಿಕಾರಿಪುರ ಸಿಪಿಐ ಹರೀಶ್ .ಕೆ ಪಾಟೀಲ್, ಸರ್ವೇ ಮೇಲ್ವಿಚಾರಕ ನಂಜುಂಡೇ ಗೌಡ, ರಾಜಸ್ವ ನಿರೀಕ್ಷಕ ರಂಗಪ್ಪ, ಗ್ರಾಮ ಲೆಕ್ಕಿಗ ಗುರುರಾಜ್ ಸೇರಿದಂತೆ ರಕ್ಷಣಾ ಇಲಾಖೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಧಿಕಾರಿಗಳು ಪಾಲ್ಗೊಂಡಿದ್ದರು.

 ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 1999-2000ರಲ್ಲಿ 20 ಎಕರೆ ಮಂಜೂರಾಗಿದೆ. ಇದರಲ್ಲಿ 16.20 ಗುಂಟೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿದ್ದಾರೆ. ಈ ಹಿಂದೆ ಒತ್ತುವರಿದಾರರಿಗೆ ಜಾಗ ತೆರವುಗೊಳಿಸಿ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಬಗರ್ ಹುಕುಂ ಸಾಗುವಳಿದಾರರು ತೆರವು ಮಾಡಿಕೊಡದ ಕಾರಣ ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿ ಗುರುತಿಸಿ ಹದ್ದು ಬಸ್ತು ಮಾಡಿ ತೆರವು ಕಾರ್ಯಚರಣೆ ಮಾಡುತ್ತಿದ್ದೇವೆ. ರೈತರಿಗೆ ಬೆಳೆ ಕಟಾವಿಗೆ ಕಾಲಾವಕಾಶ ನೀಡಲಾಗಿದ್ದು, ನಂತರ ಸಂಪೂರ್ಣ ತೆರವುಗೊಳಿಸಲಾಗುವುದು. -                                                        ಎಲ್.ಬಿ. ಚಂದ್ರಶೇಖರ್, ತಹಶೀಲ್ದಾರ್

 ಸಾಗುವಳಿದಾರರ ಹಿತವನ್ನು ಮುಂದಿಟ್ಟುಕೊಂಡು ಬೆಳೆ ಕಟಾವು ಮಾಡಿಕೊಳ್ಳಲು ಕಾಲಾವಕಾಶ ನೀಡಿ, ಸಾಗುವಳಿದಾರರು ಹಾಗೂ ಅಧಿಕಾರಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಬೇಕು, ಸದ್ಯಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ.

    -ಎಚ್.ಹಾಲಪ್ಪ, ಮಾಜಿ ಸಚಿವ.

   ಸುಮಾರು 35-40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಇದೊಂದು ಸಣ್ಣ ತುಂಡು ಭೂಮಿಯನ್ನು ಬಿಟ್ಟರೆ ಇನ್ನಾವುದೇ ಜಮೀನು ಇರುವುದಿಲ್ಲ. ಬಡವರಾದ ನಾವು ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಈ ಹಿಂದೆ ನಾವು ಭೂಮಿ ಮಂಜೂರಾತಿಗಾಗಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ್ದೇವೆ. ನಮಗೆ ಭೂಮಿಯನ್ನು ಮಂಜೂರಾತಿ ಮಾಡಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಇದ್ದಕ್ಕಿದ್ದಂತೆ ಪೊಲೀಸರನ್ನು ಮುಂದಿಟ್ಟುಕೊಂಡು ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಆಘಾತ ಉಂಟುಮಾಡಿದೆ.

   ವಿಮಲಮ್ಮ, ನೊಂದ ಸಾಗುವಳಿದಾರರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News