ಕಾವೇರಿ ಸಂರಕ್ಷಣೆ ವಿಚಾರದಲ್ಲಿ ಸಂಘಟಿತರಾಗಿ ಹೋರಾಡಿ: ನಟ ಶಿವರಾಜ್‌ಕುಮಾರ್
ಕುಶಾಲನಗರದ, ಅ.18: ರಾಜ್ಯದ ಮಹಾದಾಯಿ, ಕಾವೇರಿ ನದಿ ನೀರಿನ ವಿಚಾರವಾಗಿ ನೆರೆೆ ರಾಜ್ಯ ಹಾಗೂ ಅಲ್ಲಿನ ಜನತೆ ಬಗ್ಗೆ ದ್ವೇಷ ಸಾಧನೆ ಸಲ್ಲದು. ಸಾರ್ವಜನಿಕ ಸ್ವತ್ತಿಗೆ ಹಾನಿಯುಂಟು ಮಾಡದೆ ಶಾಂತಿಯುತವಾಗಿ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಚಲನಚಿತ್ರ ನಟ ಶಿವರಾಜ್‌ಕುಮಾರ್ ಹೇಳಿದರು.
ಅವರು ಬಾರವಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಕೊಪ್ಪಕಾವೇರಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಕಾವೇರಿ ರತ್ನ ಬಿರುದು ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರು.
ಕರ್ನಾಟದಲ್ಲಿ ನೆಲೆಸಿರುವ ಪ್ರತಿಯೊಬ್ಬ ನಾಗರಿಕನು ಕೂಡ ಜೀವನದಿಗಳ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಋಣವನ್ನು ತೀರಿಸಬೇಕಿದೆ ಎಂದರು. ರಾಜ್ಯದಲ್ಲಿ ಮಳೆಯ ಕೊರತೆ ಕಾರಣ ನೀರಿನ ಸಮಸ್ಯೆ ಎದುರಾಗಿದ್ದು ಆದಷ್ಟು ಬೇಗ ಮಳೆಯಾಗಿ ರೈತರು ಹಾಗೂ ಜನತೆಯ ಸಂಕಷ್ಟ ನೀಗುವಂತೆ ಕಾವೇರಿ ಮಾತೆಯಲ್ಲಿ ಅವರು ಪ್ರಾರ್ಥಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಕೇಂದ್ರ ಸರಕಾರ ಗಂಗಾ ನದಿ ಶುದ್ಧೀಕರಣಕ್ಕೆ ಯೋಜನೆ ರೂಪಿಸಿರುವಂತೆ ಕಾವೇರಿ ನದಿ ಸಂರಕ್ಷಣೆಗೆ ಕೂಡ ಯೋಜನೆ ರೂಪಿಸಬೇಕಿದೆ ಎಂದು ಆಗ್ರಹ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಿವರಾಜ್‌ಕುಮಾರ್ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಕಾವೇರಿ ಮಾತೆ ವಿಗ್ರಹ ನೀಡುವ ಮೂಲಕ ‘ಕಾವೇರಿ ರತ್ನ’ ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಟಿಬೆಟಿಯನ್ ನಿರಾಶ್ರಿತರ ಶಿಬಿರದ ಬೌದ್ಧ ಧರ್ಮಗುರು ಕರ್ಮ ರಿಂಪೋಚೆ, ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ರಾಮಣ್ಣ, ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಎಸ್.ಕಾಶೀಪತಿ, ಉದ್ಯಮಿ ಸಾತಪ್ಪನ್, ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಗಳ ಪ್ರಮುಖರು ಹಾಗೂ ದಾನಿಗಳನ್ನು ಸಮಿತಿ ಪರವಾಗಿ ಡಾ.ಶಿವರಾಜ್ ಕುಮಾರ್ ಗೌರವಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವರಾಜ್‌ಕುಮಾರ್ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿದರು. ಇದೇ ಸಂದರ್ಭ ಚಲನಚಿತ್ರ ಗೀತೆಗಳನ್ನು ಹಾಡಿಜನರನ್ನು ರಂಜಿಸಿದರು. ಟಿ.ಆರ್.ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿದರು.