ನಾಯಕತ್ವ ಗುಣ ಬೆಳೆಸಲು ಎನ್ನೆಸ್ಸೆಸ್ ಸಹಕಾರಿ:ಗ್ರಾಪಂ ಉಪಾಧ್ಯಕ್ಷೆ ಸುಮಾ ಬಿ
ಸಾಗರ, ಅ.18: ವಿದ್ಯಾರ್ಥಿ ದೆಸೆಯಲ್ಲಿ ಎನ್ನೆಸ್ಸೆಸ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಗ್ಗೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಾ ಬಿ. ಹೇಳಿದರು.
ತಾಲೂಕಿನ ಬಿಲಗೋಡಿಯಲ್ಲಿ ಸೋಮವಾರ ಹೆಗ್ಗೋಡಿನ ಕೇಡಲಸರ ವಿದ್ಯಾಭಿವೃದ್ಧಿ ಸಂಘದ ಎಸ್.ರೂಪಾಶ್ರೀ ಪದವಿಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎನ್ನೆಸ್ಸೆಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಬಗ್ಗೆ ತೋರಿಸಿದಷ್ಟು ಆಸಕ್ತಿಯನ್ನು, ಪಠ್ಯೇತರ ಚಟುವಟಿಕೆಗಳಲ್ಲಿ ತೋರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎನ್ನೆಸ್ಸೆಸ್‌ನಂತಹ ವಿಭಾಗಗಳು ಹೆಚ್ಚಿನ ಅರಿವು ಮೂಡಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಶಿಬಿರ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಬದುಕಿನ ಸ್ಥಿತಿಗತಿ ಅರ್ಥವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮಿತಿ ಅಧ್ಯಕ್ಷ ಎಚ್.ಎಸ್.ಸತ್ಯನಾರಾಯಣ ಭಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯಪಾಲನೆಯ ಮಹತ್ವವನ್ನು ಎನ್ನೆಸ್ಸೆಸ್ ಶಿಬಿರಗಳು ಕಲಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮನಃಪರಿವರ್ತನೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕ ಜೀವನದ ಜೊತೆಗೆ ಸಮಾಜಕ್ಕೂ ತನ್ನ ಕೊಡುಗೆಯನ್ನು ನೀಡಬೇಕು ಎಂದರು. ಪ್ರತಿಯೊಬ್ಬರಲ್ಲೂ ಒಂದೊಂದು ಕ್ಷೇತ್ರದ ಬಗ್ಗೆ ಆಸಕ್ತಿ ಇರುತ್ತದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಇಂತಹ ಶಿಬಿರಗಳ ಮೂಲಕ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ನಿಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಯುವಸಮೂಹ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ನಾಗರಾಜ ಸಭಾಹಿತ್, ಶೇಖರಪ್ಪ, ಪ್ರಾಚಾರ್ಯ ಎಂ.ಎಂ.ತಿಮ್ಮಪ್ಪ ಉಪಸ್ಥಿತರಿದ್ದರು.