ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರಾಂಚ್ ಆಫೀಸ್
ಮಡಿಕೇರಿ, ಅ.18: ಟಿಪ್ಪುಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರಾಂಚ್ ಆಫೀಸ್‌ನಂತೆ ವರ್ತಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಟೀಕಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಸಮಾಜ ಸಮಾಜಕ್ಕೆ ಸಂಬಂಧಿಸಿದ ಕೆಲಸ ಮಾಡಬೇಕೆ ಹೊರತು ಬಿಜೆಪಿಯ ಬ್ರಾಂಚ್ ಆಫೀಸ್‌ನಂತೆ ಕಾರ್ಯನಿರ್ವಹಿಸುವುದು ಸರಿಯಲ್ಲವೆಂದರು. ಟಿಪ್ಪುಜಯಂತಿ ಆಚರಿಸಬೇಕು ಎನ್ನುವುದು ಕಾಂಗ್ರೆಸ್ ಸರಕಾರದ ಅಜೆಂಡಾವಾದರೆ, ಇದನ್ನು ವಿರೋಧಿಸುತ್ತಿರುವುದು ಬಿಜೆಪಿಯ ಅಜೆಂಡಾವಾಗಿದೆ. ಪರಿಸ್ಥಿತಿ ಹೀಗಿರುವಾಗ ಕೊಡವ ಸಮಾಜ ಮತ್ತು ಕೊಡವ ಮೂಲಭೂತವಾದಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕೊಡವ ಸಮುದಾಯಕ್ಕೆ ತೋರಿದ ಅಗೌರವವಾಗಿದೆ ಎಂದವರು ಸ್ವಂತ ಬುದ್ಧಿಯ ಮೂಲಕ ಪ್ರಬುದ್ಧತೆಯನ್ನು ಮೆರೆಯಬೇಕಾಗಿದ್ದ ಕೊಡವ ಸಮಾಜ ಕೊಡವರ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಸುಬ್ಬಯ್ಯ ಆರೋಪಿಸಿದರು. ಸುಳ್ಳಿನ ಆಧಾರದಲ್ಲಿ ಟಿಪ್ಪುಜಯಂತಿಯನ್ನು ವಿರೋಧಿಸುವವರು ಅನೇಕರಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ದೇವಟ್ ಪರಂಬು ಎನ್ನುವ ಸುಳ್ಳನ್ನು ಸೃಷ್ಟಿಸಿವೆ. ಇತಿಹಾಸವನ್ನು ಅಧ್ಯಯನ ಮಾಡಿದರೆ ದೇವಟ್‌ಪರಂಬು ಪ್ರದೇಶ ಅಥವಾ ಅಲ್ಲಿ ಹತ್ಯೆ ನಡೆದಿರುವ ಬಗ್ಗೆ ಯಾವುದೇ ಸಾಕ್ಷ ್ಯಗಳಿಲ್ಲವೆಂದು ಅಭಿಪ್ರಾಯಪಟ್ಟ ಸುಬ್ಬಯ್ಯ ಕೊಡವ ಸಮಾಜ ಮೊದಲು ಚರಿತ್ರೆಯನ್ನು ಅಧ್ಯಯನ ಮಾಡಲಿ ಎಂದು ಎಚ್ಚರಿಸಿದರು. ಕೊಡವ ಸಮಾಜದ ಈ ವರ್ತನೆಯಿಂದ ಸಮಾಜದಲ್ಲಿ ಕೊಡವರನ್ನು ಪ್ರತ್ಯೇಕವಾಗಿ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗುವುದಲ್ಲದೆ ದ್ವೇಷ ಮನೋಭಾವನೆ ಬೆಳೆಯುತ್ತದೆ. ದೇವಟ್‌ಪರಂಬುವಿನಲ್ಲಿ ಕೊಡವರ ಹತ್ಯೆ ಮತ್ತು ಅತ್ಯಾಚಾರ ನಡೆದಿದೆ ಎಂದು ಸುಳ್ಳು ಹೇಳುವ ಮೂಲಕ ಕೊಡವರನ್ನು ಅವಮಾನಿಸಲಾಗುತ್ತಿದ್ದು, ಈ ಬಗ್ಗೆ ಕೊಡವ ಸಮಾಜಗಳು ಜಾಗೃತವಾಗಬೇಕಾಗಿದೆ. ಟಿಪ್ಪುವಿನಿಂದ ಈ ಕೃತ್ಯ ನಡೆದಿದೆ ಎನ್ನುವುದಕ್ಕೆ ಆಧಾರ ನೀಡುವಂತೆ ಒತ್ತಾಯಿಸಿದ ಎ.ಕೆ. ಸುಬ್ಬಯ್ಯ, ಕಳೆದ ವರ್ಷ ನಡೆದ ಟಿಪ್ಪು ಜಯಂತಿಯ ಸಂದರ್ಭ ಸಂಭವಿಸಿದ ಎರಡು ಸಾವಿನ ಪ್ರಕರಣಕ್ಕೆ ಜಯಂತಿಯನ್ನು ವಿರೋಧಿಸಿದವರೇ ಕಾರಣರೆಂದು ಆರೋಪಿಸಿದರು.
ನಾಚಪ್ಪವಿರುದ್ಧ ಕ್ರಿಮಿನಲ್ ಕೇಸ್: ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎ.ಕೆ.ಸುಬ್ಬಯ್ಯ, ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಚಪ್ಪವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು. ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಸರ್ವೇ ಸಂಖ್ಯೆ 1/6ಎನಲ್ಲಿ ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ತಲಾ 5 ಎಕರೆ ಮತ್ತು ಇನ್ನಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಒಟ್ಟು 16 ಎಕರೆ ಪೈಸಾರಿ ಜಾಗವನ್ನು ಎನ್.ಯು.ನಾಚಪ್ಪ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು. ಅಕ್ರಮ ಸಕ್ರಮ ಸಮಿತಿಯಡಿ ಪೈಸಾರಿ ಜಾಗವನ್ನು ಹೊಂದಲು ಅರ್ಹತೆ ಇಲ್ಲದಿದ್ದರೂ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅಲ್ಲದೆ, ತಮ್ಮ ಪತ್ನಿಗೆ ತಿಳಿಯದೆಯೇ ನಕಲಿ ಸಹಿ ಮಾಡುವ ಮೂಲಕ ಪತ್ನಿಯ ಹೆಸರಿನಲ್ಲೂ ಅರ್ಜಿ ಸಲ್ಲಿಸಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ತಕ್ಷಣ ಲ್ಯಾಂಡ್ ಟ್ರಿಬ್ಯುನಲ್ ಇದನ್ನು ಪರಿಶೀಲಿಸಿ ಅರ್ಜಿಯನ್ನು ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸುಬ್ಬಯ್ಯ ಆಗ್ರಹಿಸಿದರು.