ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅವ್ಯವಹಾರ ಖಂಡಿಸಿ ಪ್ರತಿಭಟನೆ
ಚಿಕ್ಕಮಗಳೂರು, ಅ.18: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ನಡೆದ ಅವ್ಯವಹಾರವನ್ನು ಖಂಡಿಸಿ ಜಿಲ್ಲಾ ಎನ್‌ಎಸ್‌ಯುಐ ಸಂಘಟನೆಯು ಪ್ರತಿಭಟನೆ ನಡೆಸಿತು.
ವಿವಿಯ ಆಡಳಿತದ ಲೋಪದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಈ ಬಾರಿ ಪರೀಕ್ಷೆಗೆ ಕುಳಿತಿದ್ದ ನಾಲ್ಕು ಲಕ್ಷ ವಿದ್ಯಾರ್ಥಿಗಳ ಪೈಕಿ ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ಮರು ಮೌಲ್ಯ ಮಾಪನದಲ್ಲಿ 10ರಿಂದ 20 ಅಂಕಗಳು ಹೆಚ್ಚು ಲಭಿಸಿವೆ. ಇದು ಮೌಲ್ಯಮಾಪನದಲ್ಲಿ ಆದ ದೋಷವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಈ ಪ್ರಕರಣದಲ್ಲಿಯೂ ವಿವಿಯಲ್ಲಿರುವ ಕೆಲವು ಕೈಗಳು ದುಡ್ಡು ಮಾಡಲು ಮುಂದಾಗಿರುವುದು ಸಾಭೀತಾಗಿದೆ. ಈ ಘಟನೆಗೆ ಕಾರಣರಾದ ವಿವಿಯ ಮುಖ್ಯಸ್ಥರನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾ ಯಿಸಿದರು.
ಈ ಕೂಡಲೇ ವಿಟಿಯು ಸಿಬಿಎಸ್‌ಇ ಪದ್ಧತಿಯನ್ನು ರದ್ದುಪಡಿಸಬೇಕು, ಕ್ರಿಟಿಕಲ್ ಇಯರ್ ಬ್ಯಾಕ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು, ಫೈನಲ್ ಇಯರ್‌ವರೆಗೂ ಕ್ಯಾರಿ ಓವರ್ ಪದ್ಧತಿ ಜಾರಿಗೊಳಿಸಬೇಕು ಹಾಗೂ ಕಟ್ಟುನಿಟ್ಟಿನ ಮೌಲ್ಯಮಾಪನ ಪದ್ಧತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮನು ಕುಮಾರ್, ವಿ. ಅಕ್ಷಯ್, ಎನ್.ಎಂ. ನಾಗೇಶ್, ಲೋಕೇಶ್ ಜಿ, ಎನ್.ವಿ ಅಕ್ಷಯ್, ಅಭಿಷೇಕ್, ಮನೋಹರ್, ಸಿ.ಸಿ. ಮಧು ಮತ್ತಿತರರು ಪಾಲ್ಗೊಂಡಿದ್ದರು.