ಶಿವಮೊಗ್ಗ: ತಣ್ಣಗಾಗದ ‘ಕಾಂಗ್ರೆಸ್’ ಕಲಹ!
ಬಿ. ರೇಣುಕೇಶ್
ಶಿವಮೊಗ್ಗ, ಅ. 18: ಜಿಲ್ಲೆಯ ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳೇಯದಲ್ಲಿ ತಲೆದೋರಿರುವ ಭಿನ್ನಮತ ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿವಾದವು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಸಚಿವ ಕಾಗೋಡು ತಿಮ್ಮಪ್ಪಹಾಗೂ ಕುಮಾರ್ ಬಂಗಾರಪ್ಪಬೆಂಬಲಿಗರು ವರಿಷ್ಠರ ಬಳಿ ಪರಸ್ಪರ ದೂರು-ಪ್ರತಿದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಕಾಗೋಡು ವಿರುದ್ಧದ ಟೀಕಾಪ್ರಹಾರವನ್ನು ಕುಮಾರ್ ಬಂಗಾರಪ್ಪ ಬೆಂಬಲಿಗರು ಮುಂದುವರಿಸಿದ್ದಾರೆ. ಕಾಗೋಡು ವಿರುದ್ಧ ಕುಮಾರ್ ಬಹಿರಂಗವಾಗಿ ಟೀಕಾಪ್ರಹಾರ ನಡೆಸುತ್ತಿರುವುದನ್ನು ಗಮನಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಬಹಿರಂಗ ಹೇಳಿಕೆ ನೀಡದಂತೆ ಮುಖಂಡರಿಗೆ ತಾಕೀತು ಮಾಡಿದ್ದರು. ಇದರ ಹೊರತಾಗಿಯೂ ಕುಮಾರ್ ಬೆಂಬಲಿಗರು ಸೋಮವಾರ ಸೊರಬದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಗೋಡು ಸೇರಿದಂತೆ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯ ಬಗ್ಗೆಯೂ ಕಿಡಿಕಾರಿದ್ದರು.
ಗದ್ದಲಕ್ಕೆ ಕಾರಣವೇನು?: ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಕೆಲ ತಿಂಗಳುಗಳ ಹಿಂದೆ ನೂತನ ಸದಸ್ಯರ ನೇಮಕ ಮಾಡಲಾಗಿದೆ. ಈ ಸದಸ್ಯರೆಲ್ಲರೂ ಜೆಡಿಎಸ್ ಪಕ್ಷಕ್ಕೆ ಸೇರಿದವರು. ಸಮಿತಿ ರಚನೆಯ ವೇಳೆ ಕಾಂಗ್ರೆಸ್‌ನವರನ್ನು ಕಡೆಗಣಿಸಲಾಗಿದೆ ಎಂಬುದು ಕುಮಾರ್ ಬಂಗಾರಪ್ಪನವರ ಆರೋಪವಾಗಿದೆ. ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪನವರು ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿ ಜೆಡಿಎಸ್ ಕಾರ್ಯಕರ್ತರಿಗೆ ಮಣೆ ಹಾಕಿದ ಕ್ರಮ ಸರಿಯಲ್ಲ ಎಂದು ಇತ್ತೀಚೆಗೆ ಸೊರಬದಲ್ಲಿ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ‘ಕಾಗೋಡುರವರಿಂದಲೇ ಜಿಲ್ಲೆಯಲ್ಲಿ ಪಕ್ಷ ಹಿಂದುಳಿಯುವಂತಾಗಿದೆ. ಅವರು ಪರೋಕ್ಷವಾಗಿ ಮತ್ತೊಂದು ಪಕ್ಷವನ್ನು ಬೆಂಬಲಿಸುತ್ತಿದ್ದು, ಕಾಂಗ್ರೆಸ್ ತೊರೆದು ಪರೋಕ್ಷವಾಗಿ ಬೆಂಬಲಿಸುತ್ತಿರುವ ಪಕ್ಷ ಸೇರ್ಪಡೆಯಾಗಲಿ’ ಎಂದು ಕಟುವಾಗಿ ಕುಟುಕಿದ್ದರು. ಕುಮಾರ್‌ರವರ ಈ ಹೇಳಿಕೆಗೆ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್, ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ ತೀವ್ರವಾಗಿ ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದರು. ದೂರು-ಪ್ರತಿದೂರು: ಕುಮಾರ್ ಬಂಗಾರಪ್ಪ ಬೆಂಬಲಿಗರು ಕಾಗೋ ಡು ತಿಮ್ಮಪ್ಪವಿರುದ್ಧ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ. ಕಾಗೋಡುರವರು ಸೊರಬ ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯರ ನೇಮಕದಲ್ಲಿ ಜೆಡಿಎಸ್ ಪಕ್ಷದ ಸದಸ್ಯರನ್ನು ನೇಮಿಸಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣನೆ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರ ನೇಮಕ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದಿಸಿದ್ದ ಪಟ್ಟಿಯನ್ನು ಕಡೆಗಣಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪವಿರುದ್ಧ ಶಿಸ್ತು ಕ್ರಮ ಜರಗಿಸಬೇಕು. ಪ್ರಸ್ತುತ ಸಮಿತಿಗೆ ನೇಮಕ ಮಾಡಿರುವ ಜೆಡಿಎಸ್ ಸದಸ್ಯರನ್ನು ವಜಾಗೊಳಿಸಿ, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ನೇಮಕ ಮಾಡಬೇಕೆಂದು ಕುಮಾರ್ ಬಂಗಾರಪ್ಪಬೆಂಬಲಿಗರು ವರಿಷ್ಠರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಕುಮಾರ್ ಬಂಗಾರಪ್ಪಹಾಗೂ ಅವರ ಕೆಲ ಬೆಂಬಲಿಗರು ಬಹಿರಂಗವಾಗಿಯೇ ಕಾಗೋಡು ತಿಮ್ಮಪ್ಪವಿರುದ್ಧ ಟೀಕೆ ನಡೆಸುತ್ತಾ ಪಕ್ಷದ ಶಿಸ್ತು ಕ್ರಮಗಳನ್ನು ಉಲ್ಲಂಘಿಸಿದ್ದಾರೆ. ಈ ಹಿಂದಿನಿಂದಲೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಇವರು ತೊಡಗಿಕೊಂಡಿದ್ದು, ಇವರ ವಿರುದ್ಧ ಶಿಸ್ತುಕ್ರಮ ಜರಗಿಸಬೇಕೆಂದು ಕಾಗೋಡು ತಿಮ್ಮಪ್ಪನವರ ಬೆಂಬಲಿಗರೂ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ವಿಚಾರವು ಸಚಿವ ಕಾಗೋಡು ತಿಮ್ಮಪ್ಪಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪನಡುವೆ ನೇರಾನೇರ ಹಣಾಹಣಿಗೆ ಎಡೆ ಮಾಡಿಕೊಟ್ಟಿದೆ.
ಸಿಎಂ - ಕೆಪಿಸಿಸಿ ಅಧ್ಯಕ್ಷರ ನಿರ್ಧಾರವೇನು?
ಈಗಾಗಲೇ ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಆರ್. ಪರಮೇಶ್ವರ್ ಅವರ ಗಮನಕ್ಕೂ ಬಂದಿದೆ. ಸಮಿತಿ ಬದಲಾವಣೆ ಮಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂದು ಕುಮಾರ್ ಬಂಗಾರಪ್ಪಮತ್ತವರ ಬೆಂಬಲಿಗರು ತೀವ್ರ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವೌನ ಮುರಿಯುತ್ತಾರಾ ಕಾಗೋಡು?
ಕುಮಾರ್ ಬಂಗಾರಪ್ಪನವರ ಆರೋಪದ ಬಗ್ಗೆ ಇಲ್ಲಿಯವರೆಗೂ ಕಾಗೋಡು ತಿಮ್ಮಪ್ಪನವರು ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಕ್ಷದ ಮುಖಂಡರ ಜೊತೆಯೂ ನೇರವಾಗಿ ಸಮಾಲೋಚನೆ ನಡೆಸಿಲ್ಲ. ಈ ವಿಚಾರದಲ್ಲಿ ಕಾಗೋಡುರವರ ನಡೆ ನಿಗೂಢವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.