‘ಬಗರ್‌ಹುಕುಂ ರೈತರ ವಿಷಯದಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗಲ್ವಾ?’
ಶಿವಮೊಗ್ಗ, ಅ. 18: ‘ರೈತರಿಗೆ ತ್ವರಿತಗತಿಯಲ್ಲಿ ನ್ಯಾಯ ಕಲ್ಪಿಸುವ ಉದ್ದೇಶದಿಂದ ಬಗರ್‌ಹುಕುಂ ಸಮಿತಿಗೆ ಕ್ರಿಯಾಶೀಲ ಸದಸ್ಯರ ನೇಮಕ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪನವರು ನ್ಯಾಯಯುತವಾಗಿ ನಡೆದುಕೊಂಡಿದ್ದಾರೆ. ಈ ಮೂಲಕ ಬಗರ್‌ಹುಕುಂ ರೈತರ ಹಿತಾಸಕ್ತಿ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ಈ ವಿಚಾರಲ್ಲಿ ರಾಜಕೀಯ ಮಾಡಲು ನಾಚಿಕೆಯಾಗಲ್ವಾ’ ಎಂದು ಶಾಸಕ ಮಧು ಬಂಗಾರಪ್ಪ ಸಹೋದರ ಕುಮಾರ್‌ರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ಬಗರ್ ಹುಕುಂ ಸಮಿತಿ ರಚನೆಯ ಬಳಿಕ ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಈ ಬಗ್ಗೆ ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಬಂಗಾರಪ್ಪ ಸಹೋದರ ಕುಮಾರ್ ಅವರ ಹೆಸರು ಬಳಸದೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಸಚಿವ ಕಾಗೋಡು ತಿಮ್ಮಪ್ಪರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸೊರಬ ತಾಲೂಕು ಬಗರ್‌ಹುಕುಂ ಸಮಿತಿಯ ಈ ಹಿಂದಿನ ಸದಸ್ಯರ ಕಾರ್ಯವೈಖರಿ ತಮಗೆ ತೃಪ್ತಿ ತಂದಿರಲಿಲ್ಲ. ಅರ್ಜಿಗಳ ವಿಲೇವಾರಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಸ್ವತಃ ರೈತರಿಂದಲೇ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಮಿತಿಗೆ ಕ್ರಿಯಾಶೀಲ ಸದಸ್ಯರ ನೇಮಕ ಮಾಡುವಂತೆ ವಿಧಾನಸಭೆ ಹಾಗೂ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮನವಿ ಮಾಡಿದ್ದೆ. ಹಾಗೆಯೇ ಮುಖ್ಯಮಂತ್ರಿ, ಕಂದಾಯ ಸಚಿವರ ಬಳಿಯೂ ಚರ್ಚೆ ನಡೆಸಿದ್ದೆ. ಈ ಹಿನ್ನೆಲೆಯಲ್ಲಿ ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಹೊಸ ಸದಸ್ಯರ ನೇಮಕ ಮಾಡಲಾಗಿದೆ. ಹೊಸ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ತ್ವರಿತಗತಿಯಲ್ಲಿ ಅರ್ಜಿಗಳ ವಿಲೇವಾರಿ ನಡೆಯುತ್ತಿದೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಹಿಂದಿನ ಚುನಾವಣೆಗಳಲ್ಲಿ ಸೊರಬ ತಾಲೂಕಿನಲ್ಲಿ ಅವರ ಪಕ್ಷದ ಸ್ಥಿತಿ ಏನಾಗಿದೆ ಎಂಬುವದನ್ನು ಅರಿತುಕೊಳ್ಳಲಿ ಎಂದು ಕುಮಾರ್ ಬಂಗಾರಪ್ಪವಿರುದ್ಧ ಕಟು ವಾಗ್ದಾಳಿ ನಡೆಸಿದರು.
‘ಕಾಗೋಡು ಅಭಿನಂದನಾರ್ಹರು’
ಬಗರ್‌ಹುಕುಂ ರೈತರ ವಿಷಯದಲ್ಲಿ ಕಂದಾಯ ಇಲಾಖೆ ಸಚಿವ ಕಾಗೊ ೀಡು ತಿಮ್ಮಪ್ಪನವರು ಕೈಗೊಳ್ಳುತ್ತಿರುವ ಕ್ರಮಗಳು ನಿಜಕ್ಕೂ ಅಭಿನಂದನಾರ್ಹವಾದುದು. ಅವರ ಕಾರ್ಯಗಳು ಪಕ್ಷಾತೀತವಾಗಿ ಮೆಚ್ಚಲೇಬೇಕಾದ ಸಂಗತಿಯಾಗಿದೆ. ಬಗರ್‌ಹುಕುಂ ಸಮಿತಿಗಳಿಗೆ ಸಕ್ರಿಯ ಸದಸ್ಯರ ನೇಮಕ ಮಾಡಿ, ರೈತರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ’ ಎಂದು ಶಾಸಕ ಮಧು ಬಂಗಾರಪ್ಪನವರು ಕಾಗೋಡು ಅವರನ್ನು ಮುಕ್ತ ಕಂಠದಿಂದ ಶ್ಲಾಘನೆ ಮಾಡಿದ್ದಾರೆ.