ಸಚಿವಾಲಯದ ಉದ್ಯೋಗಿ ತನ್ನ ತುಂಟ ಮಗನಿಗೆ ಬುದ್ಧಿ ಕಲಿಸಲು ಮಾಡಿದ್ದೇನು ನೋಡಿ

Update: 2016-10-19 03:12 GMT

ಹೊಸದಿಲ್ಲಿ, ಅ.19:  ತುಂಟ ಮಗನಿಗೆ ಬುದ್ಧಿ ಕಲಿಸಲು ಮುಂದಾದ ತಾಯಿ, ಹೆತ್ತ ಮಗನನ್ನೇ ಮನೆಯಿಂದ ಹೊರಗೆ ಅಟ್ಟಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರದ ಸಚಿವಾಲಯವೊಂದರ ಉದ್ಯೋಗಿಯಾಗಿರುವ ತಾಯಿ ತನ್ನ ಮಗನಿಗೆ ಬುದ್ಧಿ ಕಲಿಸಲು, ಲೋಧಿ ರಸ್ತೆಯಲ್ಲಿರುವ ಸರಕಾರಿ ಫ್ಲಾಟ್‌ನಿಂದ ಹೊರಹಾಕಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಪಕ್ಕದ ಉದ್ಯಾನವನದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ 14ರ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಪಾರು ಮಾಡಿದೆ.

ಜಲಪತ್‌ನಗರದಲ್ಲಿರುವ ಮಕ್ಕಳ ಕಲ್ಯಾಣ ಗೃಹಕ್ಕೆ ಈತನನ್ನು ಸೇರಿಸಲಾಗಿದೆ. ತಾಯಿಮನೆಗೆ ಆತನನ್ನು ವಾಪಸು ಕಳುಹಿಸಲು ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಲನ್ಯಾಯ ಕಾಯ್ದೆ ಅನ್ವಯ, ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ತುಂಟತನ ಪ್ರದರ್ಶಿಸದಾಗಲೆಲ್ಲ ಬಾಲಕನನ್ನು ಹೊಡೆದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತಿತ್ತು. ಗಾಜಿಯಾಬಾದ್‌ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಗ ಕೆಲ ವರ್ಷ ಹಿಂದೆ ಶಾಲೆ ಬಿಡಿಸಲಾಯಿತು ಎಂದು ಬಾಲಕ ಹೇಳಿಕೆ ನೀಡಿದ್ದಾನೆ. ಬಳಿಕ ಲೋಧಿನಗರದ ಮತ್ತೊಂದು ಶಾಲೆಗೆ ಸೇರಿಸಲಾಯಿತಾದರೂ, ಐದನೇ ತರಗತಿಯಲ್ಲಿ ಶಾಲೆ ತೊರೆದ. ಬಳಿಕ ಮತ್ತೆ ಶಾಲೆ ಬದಲಿಸಿ ಎಂಟನೇ ತರಗತಿ ವರೆಗೂ ಓದು ಮುಂದುವರಿಸಿದ. ಶಾಲೆಯಿಂದ ಪದೇ ಪದೇ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಆ ಶಾಲೆಯಿಂದ ಬಿಡಿಸಲಾಗುತ್ತಿತ್ತು ಎಂದು ಬಹಿರಂಗಪಡಿಸಿದ್ದಾನೆ.

ಕಳೆದ ವರ್ಷದ ಎಪ್ರಿಲ್‌ನಲ್ಲಿ ನೋಯ್ಡದ ಶಾಲೆಯೊಂದರ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ತಾಯಿ- ಮಗನ ನಡುವೆ ವಾಗ್ವಾದ ನಡೆದು ಒಂದು ದಿನ ಮನೆಯಿಂದ ಸ್ನೇಹಿತರ ಮನೆಗೆ ಹೊರಟು ಹೋದ. ಮತ್ತೆ ಮನೆಗೆ ಬಂದಾಗ ತಾಯಿ ಒಳಕ್ಕೆ ಸೇರಿಸಲಿಲ್ಲ ಎಂದು ಮಕ್ಕಳ ಕಲ್ಯಾಣ ಸಮಿತಿ ವರದಿ ಹೇಳಿದೆ.

ಆದರೆ ತಾಯಿ ಈ ಆರೋಪ ನಿರಾಕರಿಸಿದ್ದು, ಕೆಟ್ಟವರ ಸಹವಾಸ ಮಾಡುತ್ತಿದ್ದ ಮಗ ಹಲವು ದಿನ ಮನೆಗೇ ಬರುತ್ತಿರಲಿಲ್ಲ. ಅಮಾಯಕನಾದ ಆತನನ್ನು ಬಳಸಿಕೊಂಡು ಇದೀಗ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News