ಬದಲಾವಣೆಯಾಗುವವರೆಗೂ ಹೋರಾಟ ನಿಲ್ಲದು: ಮಾಜಿ ಸಚಿವ ಕುಮಾರ್ ಬಂಗಾರಪ್ಪ
ಬಿ. ರೇಣುಕೇಶ್
ಶಿವಮೊಗ್ಗ, ಅ. 19: ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಜೆಡಿಎಸ್ ಪಕ್ಷಕ್ಕೆ ಸೇರಿದ ಸದಸ್ಯರ ನೇಮಕ ವಿಚಾರವೀಗ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನಮತಕ್ಕೆ ಎಡೆ ಮಾಡಿಕೊಟ್ಟಿದೆ. ಸಚಿವ ಕಾಗೋಡು ತಿಮ್ಮಪ್ಪವಿರುದ್ಧ ಸ್ವಪಕ್ಷೀಯ ಮುಖಂಡ, ಮಾಜಿ ಸಚಿವ ಕುಮಾರ್ ಬಂಗಾರಪ್ಪತಿರುಗಿ ಬಿದ್ದಿದ್ದಾರೆ. ಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸುವ ಮೂಲಕ ಅಸಮಾಧಾನ ಹೊರಹಾಕಿದ್ದು, ದಿನದಿಂದ ದಿನಕ್ಕೆ ಈ ಪ್ರಕರಣ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಬುಧವಾರ ಮಾಜಿ ಸಚಿವ ಕುಮಾರ್ ಬಂಗಾರಪ್ಪತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ‘ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ನೇಮಕ ಮಾಡಲಾಗಿರುವ ಜೆಡಿಎಸ್ ಪಕ್ಷದ ಸದಸ್ಯರನ್ನು ಬದಲಾಯಿಸಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವವರೆಗೂ ತಾನು ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ. ಇದು ಪಕ್ಷದ ಕಾರ್ಯಕರ್ತರ ಹಕ್ಕೂ ಕೂಡ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾಗೋಡು ತಿಮ್ಮಪ್ಪಹಾಗೂ ಸೊರಬ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಸಹೋದರ ಮಧು ಬಂಗಾರಪ್ಪವಿರುದ್ಧ ನಡೆಸುತ್ತಿರುವ ಸಮರ ಮುಂದುವರಿಸಲು ಕುಮಾರ್ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಇದು ಭಾರೀ ರಾಜಕೀಯ ಹೈಡ್ರಾಮಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಕುಮಾರ್ ಹೇಳಿದ್ದಿಷ್ಟು?:
‘ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಮಾಡುವುದು ಬಿಟ್ಟು ಮತ್ತೊಂದು ಪಕ್ಷದ ಕಾರ್ಯಕರ್ತರ ನೇಮಕ ಮಾಡಲಾಗುತ್ತದೆ ಎಂದರೆ ಏನರ್ಥ? ಇದರಿಂದ ಪಕ್ಷ ಕಟ್ಟುವ ಕೆಲಸ ಮಾಡುವುದಾದರೂ ಹೇಗೆ? ಈ ರೀತಿಯ ಚಟುವಟಿಕೆಗಳಿಂದ ಜಿಲ್ಲೆಯಲ್ಲಿ ಪಕ್ಷ ಹಿನ್ನಡೆ ಸಾಧಿಸುವಂತಾಗುತ್ತದೆ. ಜೊತೆಗೆ ಕಾರ್ಯಕರ್ತರ ಆತ್ಮವಿಶ್ವಾಸಕ್ಕೂ ಧಕ್ಕೆ ಉಂಟಾಗುತ್ತದೆ’ ಎಂದು ಪರೋಕ್ಷವಾಗಿ ಸಚಿವ ಕಾಗೋಡು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿಯಲ್ಲಿ ಪಕ್ಷದ ಸದಸ್ಯರಿಗೆ ಅವಕಾಶ ಕೈತಪ್ಪಿದಾಗ ಈ ಬಗ್ಗೆ ಗಮನಹರಿಸುವಂತೆ ಸ್ವತಃ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲಾ ಘಟಕದವರ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ. ಆದಾಗ್ಯೂ ಸದಸ್ಯರ ಬದಲಾವಣೆ ಪ್ರಕ್ರಿಯೆ ಮಾತ್ರ ನಡೆಯಲಿಲ್ಲ. ಗಮನಹರಿಸಿಲ್ಲವೇಕೆ?: ಸಮಿತಿಯ ಸದಸ್ಯರ ಬದಲಾವಣೆ ಮಾಡುವಂತೆ ಹಾಗೂ ಹೊಸ ಸದಸ್ಯರ ನೇಮಕ ಮಾಡುವಂತೆ ಸ್ವತಃ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಆದರೆ ಇಲ್ಲಿಯವರೆಗೂ ಆ ಪತ್ರದ ಆಧಾರದ ಮೇಲೆ ಕಂದಾಯ ಇಲಾಖೆ ಸಚಿವರು ಯಾವುದೇ ಗಮನಹರಿಸಿಲ್ಲ. ಸಿಎಂ ಪತ್ರಕ್ಕೂ ಮನ್ನಣೆ ಕೊಡುವ ಕೆಲಸ ಮಾಡಿಲ್ಲವೆಂದು ಇಲಾಖೆ ಸಚಿವ ಕಾಗೋಡು ತಿಮ್ಮಪ್ಪವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತಂತೆ ತಾನು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೋರಿಕೊಳ್ಳುತ್ತೇನೆ. ಸಿಎಂರವರು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸ ತಮ್ಮದಾಗಿದೆ ಎಂದು ಹೇಳಿದ್ದಾರೆ.
‘ಏಜೆಂಟ್‌ಗಿರಿ ಕೆಲಸ ಬೇಡ’:
ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ಪ್ರಕ್ರಿಯೆ ಸಮರ್ಪಕವಾಗಿದೆ. ಸದಸ್ಯರ ನೇಮಕ ವಿಚಾರದಲ್ಲಿ ರಾಜಕೀಯ ನಡೆಸಲಾಗುತ್ತಿದೆ ಎಂದು ಸಹೋದರ, ಶಾಸಕ ಮಧು ಬಂಗಾರಪ್ಪಮಾಡಿರುವ ಟೀಕಾಪ್ರಹಾರಕ್ಕೆ ಕುಮಾರ್ ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ‘ಏಜೆಂಟ್‌ಗಿರಿ ಕೆಲಸ ಮಾಡುವುದು ಬೇಡ’ ಎಂದು ಕುಮಾರ್ ಖಾರವಾದ ಪ್ರತ್ಯುತ್ತರ ನೀಡಿದ್ದಾರೆ. ಎಐಸಿಸಿಗೂ ದೂರು: ಮತ್ತೆ ಸಿಎಂ ಭೇಟಿಯಾಗಿ ಚರ್ಚೆ
ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಪಕ್ಷದ ಕಾರ್ಯಕರ್ತರನ್ನು ಕಡೆಗಣನೆ ಮಾಡಿ ಅನ್ಯ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿರುವ ಕ್ರಮ ವಿರೋಧಿಸಿ ಎಐಸಿಸಿ ಮುಖಂಡರ ಗಮನ ಸೆಳೆಯಲು ನಿರ್ಧರಿಸಿದ್ದೆೇನೆ. ಇಷ್ಟರಲ್ಲಿಯೇ ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಆರ್. ಪರಮೇಶ್ವರ್ ಅವರ ಗಮನಕ್ಕೂ ಈ ವಿಷಯ ತರಲಾಗಿದೆ. ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತೇನೆ. ಕಾಲಮಿತಿಯಲ್ಲಿ ಸಮಿತಿಗೆ ಪಕ್ಷದ ಕಾರ್ಯಕರ್ತರ ನೇಮಕ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ. -ಕುಮಾರ್ ಬಂಗಾರಪ್ಪ, ಮಾಜಿ ಶಾಸಕ.