×
Ad

ಕಾಮಗಾರಿ ಪ್ರಗತಿಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಉದ್ಘಾಟನೆಗೆ ವಿರೋಧಿಸಿ ಪ್ರತಿಭಟನೆ

Update: 2016-10-19 22:18 IST

ಸೊರಬ, ಅ.19: ಪಟ್ಟಣದಲ್ಲಿ ಅಪೂರ್ಣಗೊಂಡ (ಪ್ರಗತಿಯಲ್ಲಿರುವ) ಖಾಸಗಿ ಬಸ್ ನಿಲ್ದಾಣದ ಉದ್ಘಾಟನೆಯನ್ನು ವಿರೋಧಿಸಿ ಯುವ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು. ಪಪಂನ ಕೆಲ ಸದಸ್ಯರ ವಿರೋಧದ ನಡುವೆಯೂ ಪಪಂ ಅಧಿಕಾರಿಗಳು ಮತ್ತು ಕೆಲವು ಚುನಾಯಿತ ಪ್ರತಿನಿಧಿಗಳು ಅಪೂರ್ಣಗೊಂಡ ಕಾಮಗಾರಿಯನ್ನು ದಿಢೀರನೆ ಉದ್ಘಾಟನೆಗೆ ಸಿದ್ಧತೆ ನಡೆಸಿರುವುದು ಸೂಕ್ತವಲ್ಲ. ಉದ್ಘಾಟಿಸುವ ಭರಾಟೆಯಲ್ಲಿ ಹಗಲು ರಾತ್ರಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಯುವ ಹೋರಾಟ ಸಮಿತಿ ಅಭಿವೃದ್ಧಿ ವಿರೋಧಿಯಲ್ಲ, ಅಭಿವೃದ್ಧಿ ಪರವಾಗಿದ್ದು, ಅನೇಕ ಜನಪರ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬಂದಿದೆ. ಆದರೆ ತಾಲೂಕಿನ ಜನತೆಯ ಬಹು ನಿರೀಕ್ಷಿತ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕೇವಲ ಪ್ರಗತಿಯಲ್ಲಿದೆ. ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಕ್ಯೂರಿಂಗ್ ಇಲ್ಲದೆ ಗುಣಮಟ್ಟ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊದಲನೆ ಮಹಡಿಯ ಕೆಲಸ ಬಾಕಿ ಇದ್ದು, ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ಅನನುಕೂಲ ಉಂಟಾಗುತ್ತದೆ. ಈ ಕಾರಣದಿಂದ ಸೌಲಭ್ಯಗಳನ್ನು ಒದಗಿಸಿ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆ ಮಾಡಬೇಕೆಂದು ಆಗ್ರಹಿಸಿ, ತಕ್ಷಣ ನಿಗದಿಪಡಿಸಿರುವ ಕಾರ್ಯಕ್ರಮವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮೊದಲು ಪಟ್ಟಣದ ರಂಗನಾಥ ದೇವಾಲಯದ ಮುಂಭಾಗದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಪಪಂ. ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಂಡಾರಿ, ಕಾರ್ಯದರ್ಶಿ ನೆಮ್ಮದಿ ಸುಬ್ಬು, ಖಜಾಂಚಿ ರವಿ ಮೇಸ್ತ್ರಿ, ನಿರ್ದೇಶಕರಾದ ಜಿ. ಕೆರಿಯಪ್ಪ, ಬಣ್ಣದಬಾಬು, ಆಟೊ ಶಿವು, ಮೊಬೈಲ್ ದೀಪು, ಎನ್‌ಎಸ್‌ಯುಐ ಅಧ್ಯಕ್ಷ ಸಂತೋಷ್, ಪಪಂ ಸದಸ್ಯರಾದ ಎಂ.ಡಿ. ಉಮೇಶ್, ಮಹೇಶ್ ಗೌಳಿ, ಬಂದಗಿ ಬಸವರಾಜ್ ಶೇಟ್, ಷಣ್ಮುಖ, ಡಿ.ಎಸ್.ಎಸ್.ನ ಗುರುರಾಜ ಮತ್ತಿತರರುಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News