×
Ad

ಮನೆ ಮನೆಗೆ ದಿನಪತ್ರಿಕೆ ಹಂಚುವ ಮೂಲಕ ರಾಜ್ಯೋತ್ಸವ ಆಚರಣೆ: ವೈ.ಎಸ್.ವಿ. ದತ್ತ

Update: 2016-10-19 22:35 IST

 ಚಿಕ್ಕಮಗಳೂರು, ಅ.19: ಕನ್ನಡ ಪತ್ರಿಕೆ ಓದುವ ಹವ್ಯಾಸ ಮೂಡಿಸಲು ಈ ಬಾರಿಯ ರಾಜ್ಯೋತ್ಸವವನ್ನು ಕನ್ನಡ ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚುವ ಮೂಲಕ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾ ಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಅವರು, ತಾಪಂ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನ.1ರಂದು ಬೆಳಗ್ಗೆ 9 ಗಂಟೆಗೆ ತಹಶೀಲ್ದಾರ್‌ರವರಿಂದ ಧ್ವಜಾರೋಹಣ ನಡೆಯಲಿದೆ. ನಂತರ ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಎಲ್ಲ್ಲ ಅಧಿಕಾರಿಗಳಿಗೆ ಮತ್ತು ಸರಕಾರಿ ನೌಕರರಿಗೆ ಕಡ್ಡಾಯವಾಗಿ ಕನ್ನಡ ದಿನಪತ್ರಿಕೆಗಳನ್ನು ಮನೆಗೆ ಹಾಕಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಾರ್ಷಿಕ ಚಂದಾದಾರರನ್ನಾಗಿಸುವ ಕಾರ್ಯಕ್ರಮ ನಡೆಸಲಾಗುವುದು.

ಪಟ್ಟಣದ ಪ್ರತೀ ಮನೆಗಳಿಗೆ ತೆರಳಿ ಕನ್ನಡ ದಿನಪತ್ರಿಕೆ ಹಂಚುವ ಮೂಲಕ ಕನ್ನಡ ಪತ್ರಿಕೆ ಓದುವ ಹವ್ಯಾಸ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತೀ ವರ್ಷ ಸಂಜೆ ಕಾರ್ಯಕ್ರಮ ಹಾಗೂ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮವನ್ನು ಎಂ.ಆರ್.ಎಂ. ರಂಗಮಂದಿರಲ್ಲಿ ಹಮ್ಮಿಕೊಳ್ಳುವ ಸಂಪ್ರದಾಯವಿತ್ತು. ಈ ಬಾರಿ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.

ಕ್ಷೇತ್ರದ ಯಳ್ಳಂಬಳಸೆ ಗ್ರಾಮದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರ ಉಪಸ್ಥಿತಿಯಲ್ಲಿ ದೇವತೆಗಳಿಗೆ ಯಾತ್ರಾ ಸಂದರ್ಭದಲ್ಲಿ ಹೇಳುವ ಅಸಾದೀ ಪದಗಳನ್ನು ಹೇಳಿಸಲಾಗುವುದು. ತಾಲೂಕಿನ ಎಲ್ಲ ಅಸಾದಿಗಳನ್ನು ಕರೆಸುವ ಮೂಲಕ ಅಸಾದಿ ಜಾನಪದ ಹಾಡುಗಳನ್ನು ಕೇಳಿಸುವ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಸರಕಾರವು ಕಳೆದ ವರ್ಷದಿಂದ ಟಿಪ್ಪುಜಯಂತಿ ಆಚರಣೆ ನಡೆಸುತ್ತಿದ್ದು, ಕಳೆದ ಬಾರಿ ಮೆರವಣಿಗೆ ನಡೆಸದೆ ಸರಳ ರೀತಿಯಲ್ಲಿ ಟಿಪ್ಪುಆಚರಣೆ ನಡೆಸಲಾಯಿತು. ಈ ಬಾರಿ ಎಲ್ಲ ಧರ್ಮ, ಎಲ್ಲ ಜಾತಿಯವರ ಸಹಕಾರದಿಂದ ಟಿಪ್ಪುಜಯಂತಿ ಆಚರಣೆ ನಡೆಸಲಾಗುವುದು. ಅಂದು ನಕ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮುಸ್ಲಿಮ್ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೆೇರಿ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಇದಕ್ಕಾಗಿ ವಿಶೇಷ ಉಪನ್ಯಾಸಕರಿಂದ ಟಿಪ್ಪು ಸಂದೇಶ ತಿಳಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಭಾಗ್ಯಾ ಅಧ್ಯಕತೆ ವಹಿಸಿದ್ದರು. ತಾಪಂ ಇಒ ಗೋಪಾಲಕೃಷ್ಣ, ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಕಸಾಪ ಅದ್ಯಕ್ಷ ರವಿಪ್ರಕಾಶ್, ಕರವೇ ಜಿಲ್ಲಾಧ್ಯಕ್ಷ ರುದ್ರೇಗೌಡ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಲಕ್ಕಪ್ಪ, ಕೆ.ಎಂ. ಮಹೇಶ್ವರಪ್ಪ, ಸೂರಿ ಶ್ರೀನಿವಾಸ್, ಮುಸಿಮ್ ಸಮಾಜದ ಅಧ್ಯಕ್ಷರಾದ ಹಬೀಬುಲ್ಲಾಖಾನ್, ಮುಖಂಡರಾದ ಎನ್. ಬಶೀರ್‌ಸಾಬ್, ಎನ್. ಇಮಾಮ್, ಇಕ್ಬಾಲ್, ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News