ಮಡಿಕೇರಿ ದಸರಾದಲ್ಲಿ ರಾಜಕೀಯ: ಜೆಡಿಎಸ್ ಆರೋಪ
ಮಡಿಕೇರಿ, ಅ.20: ಜನರಿಂದ ಜನರಿಗಾಗಿ ನಡೆಯಬೇಕಾಗಿದ್ದ ಮಡಿಕೇರಿ ದಸರಾ ಜನೋತ್ಸವ ಇಂದು ರಾಜಕೀಯ ಪ್ರತಿಷ್ಠೆಯ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಘಟಕ ಆರೋಪಿಸಿದ್ದು, ಈ ಬಾರಿಯ ದಶಮಂಟಪಗಳ ತೀರ್ಪುಗಾರಿಕೆಯನ್ನು ಪಕ್ಷ ಆಕ್ಷೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್‌ಕುಮಾರ್, ಮಡಿಕೇರಿ ದಸರಾ ಆಚರಣೆಯಲ್ಲಿ ದೂರದೃಷ್ಟಿತ್ವ ಇರಲಿಲ್ಲವೆಂದು ಟೀಕಿಸಿದರು. ಇತ್ತೀಚೆಗೆ ವಿಧಾನ ಪರಿಷತ್‌ನ್ನು ಪ್ರವೇಶಿಸಿರುವ ಸದಸ್ಯರೊಬ್ಬರು ದಸರಾ ಆಚರಣೆಯಲ್ಲಿ ರಾಜಕೀಯ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ, ಗುಂಪುಗಾರಿಕೆ, ದಬ್ಬಾಳಿಕೆ, ಒತ್ತಡ, ಸ್ವಜನ ಪಕ್ಷಪಾತ ನಡೆದಿದ್ದು, ಇದಕ್ಕೆ ದಶಮಂಟಪಗಳಿಗೆ ಬಹುಮಾನ ನೀಡುವ ಸಂದರ್ಭ ತೋರಿದ ತಾರತಮ್ಯವೇ ಸಾಕ್ಷಿಯಾಗಿದೆ. ದಶಮಂಟಪಗಳ ವೈಭವವನ್ನು ವೀಕ್ಷಿಸಿ ಅಂಕಗಳನ್ನು ನೀಡಲು ನೇಮಕ ಮಾಡಿದ ತೀರ್ಪುಗಾರರ ತಂಡಕ್ಕೆ ತೀರ್ಪುಗಾರಿಕೆ ಮಾಡುವ ಅರ್ಹತೆ ಇರಲಿಲ್ಲ ಎನ್ನುವುದು ತೀರ್ಪು ಪ್ರಕಟವಾದ ನಂತರ ತಿಳಿದು ಬಂದಿದೆ. ಈ ಬಾರಿಯ ತೀರ್ಪುಗಾರರು ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿದೆ ಎಂದರು.
ತೀರ್ಪುಗಾರರಾಗಿ ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳಲು ಅರ್ಹತೆ ಇರುವ ರಾಜ್ಯ ಮಟ್ಟದ ಕಲಾವಿದರು ತಯಾರಿದ್ದರೂ ದಸರಾ ಸಮಿತಿ ಅಥವಾ ದಶಮಂಟಪ ಸಮಿತಿ ಇವರನ್ನು ಪರಿಗಣಿಸದೆ ಅರ್ಹತೆ ಇಲ್ಲದವರನ್ನು ನೇಮಕ ಮಾಡುವ ಮೂಲಕ ಪ್ರತಿವರ್ಷ ಗೊಂದಲವನ್ನು ಸೃಷ್ಟಿಸುತ್ತಿದೆ. ಅಲ್ಲದೆ, ದಶಮಂಟಪ ಸಮಿತಿಗಳ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿದೆ ಎಂದು ಭರತ್‌ಕುಮಾರ್ ಆರೋಪಿಸಿದ್ದಾರೆ.
ಕೆಲವರು ದಸರಾ ಜನೋತ್ಸವವನ್ನು ವಿಶಾಲ ಮನೋಭಾವದಲ್ಲಿ, ಭವಿಷ್ಯದ ಪರಿಕಲ್ಪನೆಯೊಂದಿಗೆ ಆಯೋಜಿಸದೆ ಪ್ರವಾಸೋದ್ಯಮದ ಪರಿಕಲ್ಪನೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸುವುದರೊಂದಿಗೆ ವಿಶ್ವದ ಗಮನ ಸೆಳೆಯುವ ಕಾರ್ಯವಾಗಬೇಕಾಗಿತ್ತು ಎಂದರು. ಯಾವುದೇ ಉದ್ಯಮಗಳಿಲ್ಲದ ಕೊಡಗಿನಲ್ಲಿ ಪ್ರವಾಸೋದ್ಯಮದ ಮೂಲಕವೇ ಇಲ್ಲಿನ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗಬೇಕಾಗಿದೆ. ದಸರಾ ಉತ್ಸವ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸುವುದಕ್ಕಾಗಿ ಪ್ರತಿವರ್ಷ ಜನೋತ್ಸವದ ಸಂದರ್ಭ ಸರಕಾರ 10 ಕೋಟಿ ರೂ.ನ್ನು ವಿಶೇಷವಾಗಿ ಮತ್ತು ಕಡ್ಡಾಯವಾಗಿ ನೀಡುವಂತೆ ಒತ್ತಡ ಹೇರುವ ಕೆಲಸವನ್ನು ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು. ದಸರಾ ಪರಿಕಲ್ಪನೆಯನ್ನು ಕೇವಲ ಕರಗೋತ್ಸವ, ದಶಮಂಟಪ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸದೆ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮಡಿಕೇರಿ ದಸರಾವನ್ನು ವಿಶ್ವ ವಿಖ್ಯಾತವೆಂದು ಪ್ರತಿಬಿಂಬಿಸಬೇಕಾಗಿದೆ ಎಂದು ಭರತ್‌ಕುಮಾರ್ ಒತ್ತಾಯಿಸಿದರು.
ಜೆಡಿಎಸ್‌ನ ಮಡಿಕೇರಿ ತಾಲೂಕು ಅಧ್ಯಕ್ಷ ಡಾ.ಮನೋಜ್ ಬೋಪಯ್ಯ ಮಾತನಾಡಿ, ಮಡಿಕೇರಿ ದಸರಾ ರಾಜಕೀಯ ಪ್ರತಿಷ್ಠೆಯಾಗಿ ಮಾರ್ಪಡುತ್ತಿದ್ದು, ಕೆಲವೇ ಮಂದಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ದಸರಾ ಸಮಿತಿ ಪಾರದರ್ಶಕವಾಗಿರಬೇಕೆಂದ ಅವರು, ಯಾವ ಮಾನದಂಡದ ಆಧಾರದಲ್ಲಿ ದಶಮಂಟಪಗಳ ತೀರ್ಪುಗಾರರನ್ನು ನೇಮಕ ಮಾಡಲಾಗಿತ್ತು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆ ರಾಧಾ, ಪರಿಶಿಷ್ಟ ಜಾತಿ, ಪಂಗಡ ಘಟಕದ ಅಧ್ಯಕ್ಷ ಎಚ್.ಎಸ್. ಯೋಗೇಶ್‌ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮನ್ಸೂರ್ ಅಲಿ ಹಾಗೂ ಮಡಿಕೇರಿ ನಗರ ಸಹ ಕಾರ್ಯದರ್ಶಿ ಸಿ.ದೀಪಕ್ ಉಪಸ್ಥಿತರಿದ್ದರು.