ನಂಜನಗೂಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ಮೈಸೂರು, ಅ.23: ‘ನಂಜನಗೂಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಸಮಾವೇಶ ವಿಶೇಷ ಸನ್ನಿವೇಶದಲ್ಲಿ ಏರ್ಪಾಡಾಗಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಶ್ರೀನಿವಾಸ ಪ್ರಸಾದ್ ಅವರು ನನ್ನ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದಾರೆ. ನಾನು ಆ ರೀತಿ ಯಾವತ್ತೂ ಮಾತನಾಡಲಾರೆ. ರಾಜ್ಯದ ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ. ಎಲ್ಲರ ಬಗ್ಗೆ ನನಗೆ ಗೌರವ ಇದೆ. ಸಿದ್ದರಾಮಯ್ಯ ಅವರು ಕೀಳರಿಮೆಯಿಂದ ನನ್ನನ್ನು ಕೈ ಬಿಟ್ಟಿದ್ದಾರೆ ಸಂಪುಟದಿಂದ ಎಂದಿದ್ದಾರೆ. ಆ ರೀತಿ ಇದ್ದಿದ್ದರೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಲೇ ಇರಲಿಲ್ಲ. ಹಿರಿಯರು ಎಂಬ ಕಾರಣಕ್ಕೆ ನಾನೇ ಶಿಫಾರಸು ಮಾಡಿದ್ದು. ಯಾರೂ ಅವರ ಹೆಸರು ಹೇಳಲಿಲ್ಲ. ಪ್ರಸಾದ್ ಅವರ ಬಗ್ಗೆ ದ್ವೇಷ, ಅಸೂಯೆ ಇದ್ದಿದ್ದರೆ ಮಹತ್ವದ ಕಂದಾಯ ಖಾತೆ ಕೊಡುತ್ತಿರಲಿಲ್ಲ ಎಂದು ಹೇಳಿದರು.
ನಮ್ಮಲ್ಲಿ 123 ಶಾಸಕರಿದ್ದಾರೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. 34 ಮಂದಿಗೆ ಮಾತ್ರ ಅವಕಾಶ. ಪ್ರಸಾದ್ ಒಬ್ಬರಲ್ಲ 16 ಮಂದಿಯನ್ನು ಸಂಪುಟದಿಂದ ಕೈ ಬಿಡಲಾಗಿದೆ. ಕೈ ಬಿಡುವಾಗ ಹೇಳಲಿಲ್ಲ ಅಂತಾರೆ. ಆದರೆ ಮಂತ್ರಿ ಪರಿಷತ್ ಸಭೆಯಲ್ಲಿ ಹೇಳಿದ್ದೆ. ಅನಿವಾರ್ಯವಾಗಿ ಕೆಲವರನ್ನ ಸಂಪುಟದಿಂದ ಕೈ ಬಿಡಬೇಕಾಗುತ್ತದೆ ಎಂದು. ಗುತ್ತೇದಾರ್, ಮಾಲಕರಡ್ಡಿ, ಕೋಳಿವಾಡ, ಪಿರಿಯಾಪಟ್ಟಣ ವೆಂಕಟೇಶ್ ಅವರಿಗೆ ಮಂತ್ರಿ ಸ್ಥಾನ ಕೊಡಲಾಗಲಿಲ್ಲ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ ? ಪ್ರಸಾದ್ ಅವರು ಇದ್ದ ಮಂತ್ರಿ ಪರಿಷತ್ ಸಭೆಯಲ್ಲಿ ಕೆಲವರನ್ನು ಕೈ ಬಿಡಬೇಕಾಗುತ್ತದೆ ಎಂದಾಗ ಯಾರೂ ಮಾತನಾಡಲಿಲ್ಲ. ಇದಕ್ಕಿಂತ ಇನ್ನೇನು ಮಾಡಬೇಕು ಎಂದು ಸಿಎಂ ಪ್ರಶ್ನಿಸಿದರು.
ಅಧಿಕಾರ ಇದ್ದರೆ ಪಕ್ಷ ಬೇಕು, ಇಲ್ಲದಿದ್ದರೆ ಬೇಡ. ನಮಗೆ ಅಧಿಕಾರ ಅದಾಗಿಯೇ ಬರಲಿಲ್ಲ. ಬಂದಿದ್ದು ಆರೂವರೆ ಕೋಟಿ ಜನರಿಂದ.
ಪಕ್ಷ ನಮಗೆ ಅನಿವಾರ್ಯ, ನಾವು ಪಕ್ಷಕ್ಕೆ ಅನಿವಾರ್ಯ ಅಲ್ಲ. ಪಕ್ಷದ ಆಸ್ತಿ ಕಾರ್ಯಕರ್ತರು. ನಿಮಗೆ ನಾನು ದ್ರೋಹ ಮಾಡಿದ್ದೇನಾ ?
ಪ್ರಸಾದ್ ರಾಜಿನಾಮೆ ನೀಡಿದ್ದು ದುರದೃಷ್ಟಕರ. ಅಂತಿಮವಾಗಿ ತೀರ್ಮಾನ ಮಾಡುವುದು ಜನ. ನನ್ನನ್ನು ಅಥವಾ ಪ್ರಸಾದ್ ಅವರನ್ನು ಸೋಲಿಸುವುದು ಬಿಡುವುದು ಜನರ ತೀರ್ಮಾನ ಎಂದು ಸಿಎಂ ಸ್ಪಷ್ಟಪಡಿಸಿದರು.
ಚಾಮುಂಡೇಶ್ವರಿ ಉಪ ಚುನಾವಣೆಗೂ ಮುನ್ನ ಐದು ಚುನಾವಣೆಗಳಲ್ಲಿ ನಾನು ಗೆದ್ದಾಗ ಪ್ರಸಾದ್ ಎಲ್ಲಿದ್ದರು? 85 ಲಕ್ಷದ ವಾಚ್ ಕಟ್ಟಿದ್ದಾರೆ ಸಿಎಂ ಎಂದರು ಪ್ರಸಾದ್. ಕಟ್ಟಿಕೊಂಡಾಗ ಯಾಕೆ ಹೇಳಲಿಲ್ಲ. ಆ ಬಗ್ಗೆ ತನಿಖೆ ಆಗಿ ಸರಕಾರಕ್ಕೆ ವಾಚ್ ಕೊಟ್ಟೆ. ಇದನ್ನೆಲ್ಲ ಕೇಳಿದರೆ ನೋವಾಗುತ್ತೆ. ಪ್ರಸಾದ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಆರು ತಿಂಗಳ ಒಳಗೆ ಇಲ್ಲಿ ಮರು ಚುನಾವಣೆ ಬರಲಿದೆ. ನಮ್ಮ ಮನೆ ಸುಭದ್ರ ಮಾಡಬೇಕು. ಅದಕ್ಕಾಗಿ ಸಮಾವೇಶ ಆಯೋಜಿಸಲಾಗಿದೆ. ಯಾವುದೇ ಪ್ರತಿಷ್ಠೆಗೆ ಅಲ್ಲ. ಚುನಾವಣೆಯನ್ನು ಸವಾಲು ಎಂದು ಸ್ವೀಕಾರ ಮಾಡಿಲ್ಲ. ಮರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅದಕ್ಕೆ ತಯಾರಾಗಿ ಎಂದು ಮನವಿ ಮಾಡಲು ಈ ಸಮಾವೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಮಹದೇವಪ್ಪ, ಮಹದೇವಪ್ರಸಾದ್, ಸೇರಿದಂತೆ ಸಂಸದರು, ಶಾಸಕರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.