×
Ad

ಸವರ್ಣೀಯರಿಂದ ದಲಿತರು ವಾಸಿಸುವ ಗ್ರಾಮದ ಸುತ್ತ ಬೇಲಿ, ಸಾಮಾಜಿಕ ಬಹಿಷ್ಕಾರ!

Update: 2016-10-23 22:19 IST


ತುಮಕೂರು, ಅ.23: ಆಂಜನೇಯ ಸ್ವಾಮಿ ದೇವಸ್ಥಾನದ ಪ್ರವೇಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮಧುಗಿರಿ ತಾಲೂಕಿನ ಮಸರಪಡಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ಉಂಟಾಗಿದ್ದ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದ್ದು, ಈಗ ದಲಿತರಿಗೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ.


ಮೊಹರಂ ಹಬ್ಬದ ವೇಳೆಯಲ್ಲಿ ಸವರ್ಣೀಯರು ದಲಿತರಿಗೆ ನೀವು ಕೇವಲ ತಮಟೆ ಬಾರಿಸಬೇಕು, ಗೆಜ್ಜೆ ಕಟ್ಟಿ ಕುಣಿಯಬಾರದು ಎಂದಿದ್ದರು. ಈ ವಿಷಯವಾಗಿ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ದಲಿತರು ಆಂಜನೇಯ ಸ್ವಾಮಿ ದೇವಸ್ಥಾನದ ಪ್ರವೇಶ ಕೋರಿದ್ದರು. ಪ್ರಕರಣ ಪೊಲೀಸ್ ಠಾಣೆ, ತಹಶೀಲ್ದಾರ್‌ವರೆಗೂ ಮುಟ್ಟಿತ್ತು. ಹಾಗಾಗಿ ಕಳೆದ ರವಿವಾರ ಅಧಿಕಾರಿಗಳು ಸಂಧಾನ ಸಭೆ ನಡೆಸಿ ದಲಿತರು ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದಾದ ನಂತರ ಎರಡು ಸಮುದಾಯಗಳ ನಡುವೆ ಕಳೆದ ಒಂದು ವಾರದಿಂದ ಮುಸುಕಿನ ಗುದ್ದಾಟ ನಡೆದಿತ್ತು. ಈಗ ಸವರ್ಣಿಯರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಮತ್ತಷ್ಟು ಉಲ್ಬಣಗೊಂಡಿದೆ. ಈ ಘಟನೆ ಆಸ್ಪಶ್ಯತೆ ಇಲ್ಲ ಎನ್ನುವ ಗೋಸುಂಬೆ ಮನುವಾದಿಗಳಿಗೆ ಸಾಕ್ಷ ಒದಗಿಸಿದೆ. ಈ ಘಟನೆಯ ನಂತರ ಗ್ರಾಮದ ರೆಡ್ಡಿ ಜನಾಂಗದವರು ದಲಿತರು ತಿರುಗಾಡುವ ಜಾಗಗಳಿಗೆ ಮುಳ್ಳುಬೇಲಿ ನಿರ್ಮಿಸಿದ್ದು,ರೆಡ್ಡಿ ಮತ್ತು ದಲಿತರು ಸೇರಿ ಜಂಟಿ ಬೇಸಾಯ ಮಾಡುತ್ತಿದ್ದ ಬೆಳೆಯನ್ನು ಕಸಿದುಕೊಂಡು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.


 ದಲಿತರು ತಮ್ಮ ಜಮೀನುಗಳಿಗೆ ಹೋಗಲು ಮೇಲ್ವರ್ಗದ ರೆಡ್ಡಿ ಜನಾಂಗದ ಜಮೀನಿನ ಮೇಲೆ ಹಾದು ಹೋಗಬೇಕು. ಬೇಲಿ ಹಾಕಿರುವುದರಿಂದ ಜಮೀನಿಗೆ ಹೋಗಿ ದನಕರುಗಳನ್ನು ಮೇಯಿಸಲು, ಹುಲ್ಲು, ಸೋಪ್ಪು ತರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗ್ರಾಮದ ಅಂಗಡಿಗಳಲ್ಲಿ ದಲಿತರಿಗೆ ಸಾಮಾನು ಸರಂಜಾಮುಗಳನ್ನು ನೀಡಬಾರದು ಎಂದು ಗ್ರಾ ುದ ಮುಖಂಡರು ಆದೇಶ ನೀಡಿದ್ದು, ದಲಿತರ ಸ್ಥಿತಿ ಚಿಂತಾಜನಕವಾಗಿದೆ. ಸಣ್ಣ ಪುಟ್ಟ ಜಮೀನುಗಳನ್ನು ಹೊರತು ಪಡಿಸಿ ಕೂಲಿಯಿಂದಲೇ ಬದುಕುತ್ತಿದ್ದ ದಲಿತರನ್ನು ಕೃಷಿ ಕೂಲಿಗೂ ಕರೆಯುತ್ತಿಲ್ಲ. ಇದರಿಂದ ಊಟಕ್ಕೂ ಕಷ್ಟಪಡುವಂತಾಗಿದೆ. ಗಂಡಸರು ಕೂಲಿ ಮಾಡಿದರೆ ಹೆಂಗಸರು ಗ್ರಾಮದಲ್ಲಿರುವ ಊದುಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮೇಲ್ವರ್ಗದವರ ನಿರ್ದೇಶನದಂತೆ ಊದುಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದು ದಲಿತರ ಅಳಲಾಗಿದೆ.

ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ದಲಿತರು ತಿರುಗಾಡದಂತೆ ನಿರ್ಮಿಸಿರುವ ಬೇಲಿ ತೆಗೆಸಿ, ಜೀವನೋಪಾಯಕ್ಕೆ ಮಾರ್ಗ ಕಲ್ಪಿಸಬೇಕು ಎಂಬುದು ಒತ್ತಾಯವಾಗಿದೆ. ಘಟನೆ ಹಿನ್ನೆಲೆ: ಪ್ರತಿ ವರ್ಷ ಮೊಹರಂ ಕಡೆಯ ದಿನ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂದೆ ದಲಿತರು ತಮಟೆ ಹೊಡೆದರೆ, ರೆಡ್ಡಿಗಳು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದು ವಾಡಿಕೆ. ಕಳೆದ ನಾಲ್ಕೈದು ವರ್ಷಗಳಿಂದ ದಲಿತರು ತಮಟೆ ಬಡಿಯುವುದರ ಜೊತೆಗೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಗ್ರಾಮದ ಮುಖಂಡರಲ್ಲಿ ಇಟ್ಟಿದ್ದರು. ಇದಕ್ಕೆ ಒಪ್ಪದ ಮೇಲ್ಜಾತಿಯ ಮುಖಂಡರು ಕೇವಲ ತಮಟೆ ಹೊಡೆಯುವುದಾದರೆ ಹೊಡೆಯಿರಿ ಇಲ್ಲವಾದರೆ ಬೇಡ ಎಂದು ಹೇಳಿದ್ದರು. ಹಾಗಾಗಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಪ್ರವೇಶವನ್ನು ದಲಿತರು ಕೋರಿದ್ದರು. ಇದರಿಂದ ಸಮಸ್ಯೆ ಇನ್ನಷ್ಟು ಬಿಗಾಡಾಯಿಸಿ ತಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದು, ದಲಿತರಿಗೆ ದೇವಸ್ಥಾನದ ಪ್ರವೇಶಕ್ಕೆ ಅನುಮತಿ ದೊರಕಿತ್ತು. ಆಗಿನಿಂದ ಗ್ರಾಮದ ಎರಡು ಸಮುದಾಯಗಳ ನಡುವೆ ಬಿಕ್ಕಟ್ಟು ತಲೆದೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News