×
Ad

ಒಡಿಸ್ಸಿ ನೃತ್ಯಪಟು ಉದಯಕುಮಾರ್ ಸಾಧನೆ ಶ್ಲಾಘನೀಯ:ಶಾಸಕ ಕಿಮ್ಮನೆ ರತ್ನಾಕರ

Update: 2016-10-24 22:46 IST

 ತೀರ್ಥಹಳ್ಳಿ , ಅ.24: ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಡಿಸ್ಸಿ ನೃತ್ಯದ ಮೂಲಕ ಮಲೆನಾಡಿನ ಹೆಸರನ್ನು ಶಿಖರಕ್ಕೇರಿಸಿದ ಖ್ಯಾತ ನೃತ್ಯಪಟು ಉದಯಕುಮಾರ್ ಶೆಟ್ಟಿ ಅವರ ಸಾಧನೆಯನ್ನು ಪ್ರತಿಯೊಬ್ಬ ಮಲೆನಾಡಿಗರು ಶ್ಲಾಸಬೇಕೆಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ತೀರ್ಥಹಳ್ಳಿಯ ನಾಗರಿಕ ಅಭಿನಂದನಾ ಸಮಿತಿ ಆಯೋಜಿಸಿದ್ದ ಖ್ಯಾತ ಒಡಿಸ್ಸಿ ನೃತ್ಯಪಟು ಉದಯಕುಮಾರ್ ಶೆಟ್ಟಿ ಮತ್ತು ಸೌಮ್ಯಾ ಉದಯಕುಮಾರ್ ಅವರ ಅಭಿನಂದನಾ ಸಮಾರಂಭ ಹಾಗೂ ಒಡಿಸ್ಸಿ ನೃತ್ಯ ಪ್ರದರ್ಶನದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.

ಒಡಿಸ್ಸಿ ನೃತ್ಯದ ಮೂಲಕ ವಿಶಿಷ್ಟ ಸಾಧನೆ ತೋರಿದ ಉದಯಕುಮಾರ್ ಶ್ರಮ ಇಂದಿನ ಯುವ ಪೀಳಿಗೆ ಗೌರವಿಸಬೇಕಾಗಿದೆ. ಒಬ್ಬ ಮಲೆನಾಡಿನ ಸಾಮಾನ್ಯ ಯುವಕ ಖ್ಯಾತ ನೃತ್ಯಪಟು ದಿ. ಪ್ರತಿಮಾ ಬೇಡಿ ಅವರ ಅಪ್ಪಟ ಶಿಷ್ಯನಾಗಿ ಈ ಮಟ್ಟಕ್ಕೆ ಏರಿರುವುದು ಆತನ ಕಲೆಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದರು2

ಪಪಂ ಅಧ್ಯಕ್ಷ ಸಂದೇಶ್ ಜವಳಿ ಮಾತನಾಡಿ, ಕಲಾ ಕುಟುಂಬದಿಂದ ಬಂದ ಪ್ರತಿಭೆ ಉದಯಕುಮಾರ್ ಒಬ್ಬ ಕಲಾತಪಸ್ವಿಯಾಗಿ ಸಾಧನೆ ಮಾಡಿದ್ದಾರೆ. ಇಂತಹ ಕಲಾವಿದನಿಗೆ ಅಭಿನಂದಿಸುವುದು ಮಲೆನಾಡಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉದಯಕುಮಾರ್ ಶೆಟ್ಟಿ, ನನ್ನ ವೃತ್ತಿ ಬದುಕು ಆರಂಭಿಸಿದ ತೀರ್ಥಹಳ್ಳಿಯಲ್ಲಿ ಒಬ್ಬ ಹಾಲು ಮಾರುವ ಹುಡುಗನಾಗಿ ಬದುಕು ಕಟ್ಟಿಕೊಂಡೆ. ನಾಟ್ಯ ವೃತ್ತಿಯಲ್ಲಿ ನಿಷ್ಠೆ ಕಲಿಯಲು ನೃತ್ಯ ಗುರು ಪ್ರತಿಮಾ ಬೇಡಿ, ಕೃಷ್ಣಾಚರಣ್ ಮಹಾಪಾತ್ರ ಹಾಗೂ ತೀರ್ಥಹಳ್ಳಿಯ ಸದಾನಂದ ಪಾತ್ರೆಯವರನ್ನು ಎಂದೂ ಮರೆಯಲಾರೆ ಎಂದರು.

ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕೆ.ಆರ್. ದಯಾನಂದ್ ಉಪಸ್ಥಿತರಿದ್ದರು. ಡಾನ್ ರಾಮಣ್ಣ ಸ್ವಾಗತಿಸಿ, ಮುರಳೀಧರ್ ಕಿರಣಕೆರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News