ಬಾಲಕಿಯ ಕಿಡ್ನಿ ವೆಫಲ್ಯ : ಧನ ಸಹಾಯಕ್ಕೆ ಕೋರಿಕೆ
ಕಾರವಾರ, ಅ.24: 13ವರ್ಷದ ಬಾಲಕಿಯು ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು , ಚಿಕಿತ್ಸೆಗಾಗಿ ಪಾಲಕರು ದಾನಿಗಳ ಸಹಕಾರಕ್ಕಾಗಿ ಅಂಗಲಾಚುತ್ತಿದ್ದಾರೆ.
ಬಡ ಕುಟುಂಬದ ತಾಲೂಕಿನ ಬಿಣಗಾದ ಜನತಾ ಕಾಲನಿಯ ಸ್ವಾತಿ ಸಂತೋಷ್ ಗುನಗಿ(13)ಯ ಚಿಕಿತ್ಸೆಗೆ ಬರೋಬ್ಬರಿ 9 ಲಕ್ಷ ರೂ. ವೆಚ್ಚ ತಗಲಬಹುದು ಎಂದು ವೈದ್ಯರು ತಿಳಿಸಿದ್ದರಿಂದ ಪಾಲಕರಿಗೆ ದಾರಿ ತೋರದಂತಾಗಿದೆ. ಬಿಣಗಾದ ಮೂಡಲಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಮೂತ್ರ ವಿಸರ್ಜನೆ ಸಂದಭರ್ದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರಿಂದ ಮನೆಯವರು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಇಲ್ಲಿ ಚಿಕಿತ್ಸೆ ನಡೆಸಿ ಡಾ. ಪ್ರಸನ್ನ ಆಕೆಯ ಎರಡು ಕಿಡ್ನಿ ವೈಫಲ್ಯವಾಗಿರುವುದರ ಬಗ್ಗೆ ಪತ್ತೆ ಹಚ್ಚಿದರು.
ಉನ್ನತ ಪರೀಕ್ಷೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಿದ್ದರಿಂದ ಮಂಗಳೂರಿನಲ್ಲಿ ಚಿಕಿತ್ಸೆಗೊಳಪಡಿಸಿದಾಗ ಎರಡು ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ಖಾತ್ರಿಯಾಯಿತು. ಅಲ್ಲದೆ ಸಂಪೂರ್ಣ ಚಿಕಿತ್ಸೆಗೆ 9 ಲಕ್ಷ ರೂ. ಹಣ ವೆಚ್ಚವಾಗುವುದರ ಬಗ್ಗೆ ಮಾಹಿತಿ ನೀಡಿದರು. ಸ್ವಾತಿಯ ತಂದೆ ಸಂತೋಷ ಗುನಗಿ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಕಾಮಾಕ್ಷಿ ಅವರಿವರ ಮನೆ ಕೆಲಸಕ್ಕೆ ಹೋಗುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಪಾಲಕರಿಗೆ ಮಗಳ ಚಿಕಿತ್ಸೆ ವೆಚ್ಚ ಭರಿಸುವುದು ಅಸಾಧ್ಯದ ಮಾತಾಗಿದೆ. ಸದ್ಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವಳಿಗೆ ವಾರಕ್ಕೆ ಒಮ್ಮೆ ಡಯಾಲಿಸಿಸ್ ಮಾಡಿಸಲಾಗುತ್ತಿದೆ.
ಇದಲ್ಲದೆ ಇನ್ನಿತರ ವೈದ್ಯಕೀಯ ವೆಚ್ಚದಿಂದ ಕುಟುಂಬದವರು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಪರಿಚಯದವರಲ್ಲಿ ಸಂಬಂಧಿಕರ ಬಳಿ ಕೈಲಾದಷ್ಟು ಸಹಾಯ ನೀಡುವಂತೆ ಅಂಗಲಾಚಿದ್ದಾರೆ. ಬಾಲಕಿ ಸ್ವಾತಿಯ ಕಿಡ್ನಿ ಮರು ಜೋಡಣೆಗೆ 9 ಲಕ್ಷ ರೂ ಆವಶ್ಯಕತೆ ಇದೆ. ದಾನಿಗಳು ಸಹಾಯ ಮಾಡಿ ತಮ್ಮ ಮಗಳ ಪುನರ್ ಜನ್ಮಕ್ಕೆ ಮನವಿ ಮಾಡಿದ್ದಾರೆ. ಸಹಾಯ ಮಾಡಲು ಇಚ್ಛೆವುಳ್ಳವರು ಸ್ವಾತಿ ಸಂತೋಷ ಗುನಗಿ ಹೆಸರಿನ ಸಿಂಡಿಕೇಟ್ ಬ್ಯಾಂಕ್‌ನ ಬಿಣಗಾ ಶಾಖೆಯ ಖಾತೆ ಸಂಖ್ಯೆ 03322200046856ಗೆ ಸಹಾಯ ಧನ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9731539559 ಸಂತೋಷ ಗುನಗಿ ಇವರನ್ನು ಸಂಪರ್ಕಿಸಬಹುದು.