×
Ad

ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ: ಹೈಕಮಾಂಡ್ ಅಸ್ತು; 20 ಶಾಸಕರಿಗೆ ಮಣೆ

Update: 2016-10-24 23:44 IST

ಹೊಸದಿಲ್ಲಿ/ಬೆಂಗಳೂರು, ಅ.24: ಸಚಿವ ಸಂಪುಟ ಪುನಾರಚನೆ, ಕಾವೇರಿ ಜಲ ವಿವಾದ ಸೇರಿದಂತೆ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ 95ಕ್ಕೂ ಹೆಚ್ಚು ನಿಗಮ, ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ನೇಮಕಾತಿಗೆ ಕಾಲ ಕೂಡಿ ಬಂದಿದೆ.

ಸೋಮವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಿಗಮ ಮಂಡಳಿ ನೇಮಕಾತಿಗೆ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಿಲ್ಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದು, ಅವರು ಅನುಮೋದನೆ ನೀಡಿ ನಮಗೆ ಕಳುಹಿಸಿ ಕೊಡುತ್ತಾರೆ ಎಂದರು. ಹೈಕಮಾಂಡ್‌ಗೆ ನಾವು ನೀಡಿರುವ ಪಟ್ಟಿಯಲ್ಲಿ ಶಾಸಕರ ಹೆಸರುಗಳಿವೆ. ವಿಧಾನಪರಿಷತ್‌ಗೆ ಸದಸ್ಯರ ನಾಮ ನಿರ್ದೇಶನ ಮಾಡುವ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಯಾರನ್ನು ನಾಮನಿರ್ದೇಶನ ಮಾಡ ಬೇಕೋ ಅವರ ಹೆಸರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಇನ್ನೆರಡು ದಿನಗಳಲ್ಲಿ ನಮಗೆ ಕಳುಹಿಸಿ ಕೊಡಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವುದಕ್ಕಿಂತ ಮುಂಚಿತವಾಗಿ ದಿಗ್ವಿಜಯ್‌ಸಿಂಗ್ ಜೊತೆ ಚರ್ಚೆ ನಡೆಸಿದ ಮುಖಂಡರು, ನಿಗಮ, ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಅಂತಿಮಗೊಳಿಸಿದರು.

 ರಾಹುಲ್ ಮನವೊಲಿಕೆ ಯಶಸ್ವಿ: ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ನಿರಾಕರಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

 ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಅನಿವಾರ್ಯ. ಮುಂದಿನ ಚುನಾವಣೆ ಹಾಗೂ ಪಕ್ಷ ಸಂಘಟನೆಯ ಉದ್ದೇಶದಿಂದ ಶಾಸಕರಿಗೆ ಅವಕಾಶ ಮಾಡಿಕೊಡಬೇಕು ಎಂದು ರಾಹುಲ್ ಗಾಂಧಿಗೆ ಮುಖ್ಯಮಂತ್ರಿ ಮನವರಿಕೆ ಮಾಡಿಕೊಟ್ಟರು.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ತೃಪ್ತಿಪಡಿಸಲು ರಾಜು ಆಲಗೂರು, ಶಿವಾನಂದ ಪಾಟೀಲ್, ಮಾಲಿಕಯ್ಯ ಗುತ್ತೇದಾರ್, ಎಂಟಿಬಿ ನಾಗರಾಜ್ ಸೇರಿದಂತೆ ಸುಮಾರು 20 ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅ.29ಕ್ಕೆ ಆರು ವರ್ಷ ಪೂರ್ಣಗೊಳಿಸಲಿದ್ದಾರೆ. ಪರಮೇಶ್ವರ್ ಗೃಹ ಸಚಿವರಾಗಿಯೂ ಜಬಾಬ್ದಾರಿ ನಿರ್ವಹಿಸುತ್ತಿರುವುದರಿಂದ, ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡುವ ವಿಚಾರದ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆದಿದ್ದು, ನ.4ರಂದು ಮತ್ತೆ ಹೊಸದಿಲ್ಲಿಗೆ ಬರುವಂತೆ ಸಿದ್ದರಾಮಯ್ಯನವರಿಗೆ ರಾಹುಲ್‌ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸ ಪ್ರಸಾದ್‌ಗೆ ತಿರುಗೇಟು: ದುಬಾರಿ ಕೈ ಗಡಿಯಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸಿಬಿ ಹಾಗೂ ಲೋಕಾಯುಕ್ತದಿಂದ ತನಿಖೆ ನಡೆದು ಸತ್ಯಾಂಶ ಹೊರ ಬಂದಿದೆ. ಸರಕಾರದಲ್ಲಿದ್ದಾಗ ಶ್ರೀನಿವಾಸ ಪ್ರಸಾದ್ ಯಾಕೆ ಸುಮ್ಮನಿದ್ದರು ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

‘ಮುಖ್ಯಮಂತ್ರಿಯ ಬಳಿಯಿರುವ ದುಬಾರಿ ಕೈಗಡಿಯಾರವು ಕದ್ದುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನನಗೆ ಹೇಳಿದ್ದರು’ ಎಂದು ಶ್ರೀನಿವಾಸ ಪ್ರಸಾದ್ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪರಮೇಶ್ವರ್, ಶ್ರೀನಿವಾಸ ಪ್ರಸಾದ್‌ರ ಬಳಿ ತಾನು ಮುಖ್ಯಮಂತ್ರಿಯ ಕೈಗಡಿಯಾರದ ಕುರಿತು ಯಾವ ಚರ್ಚೆಯನ್ನೂ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಧಾನಸೌಧದ ಆವರಣದಲ್ಲಿ ವಶಪಡಿಸಿಕೊಂಡಿರುವ ಸುಮಾರು 2 ಕೋಟಿ ರೂ. ನಗದು ಹಣಕ್ಕೆ ಸಂಬಂಧಿಸಿದಂತೆ, ಆ ಹಣ ಯಾರಿಗೆ ಸೇರಿದ್ದು ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸೂಕ್ತವಾದ ಕ್ರಮ ಕೈಗೊಳ್ಳಲಿದ್ದಾರೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News