ಸೈರಸ್ ಮಿಸ್ತ್ರಿಯಿಂದ ಟಾಟಾ ಸನ್ಸ್,ರತನ್ ವಿರುದ್ಧ ನಾಲ್ಕು ಕೇವಿಯಟ್‌ಗಳು ದಾಖಲು

Update: 2016-10-25 11:49 GMT

ಮುಂಬೈ,ಅ.25: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮಂಗಳವಾರ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಟಾಟಾ ಸನ್ಸ್,ರತನ್ ಟಾಟಾ ಮತ್ತು ಸರ್ ದೋರಾಬ್ಜಿ ಟಾಟಾ ಟ್ರಸ್ಟ್ ವಿರುದ್ಧ ನಾಲ್ಕು ಕೇವಿಯಟ್‌ಗಳನ್ನು ದಾಖಲಿಸಿದ್ದಾರೆ. ಸೋಮವಾರವಷ್ಟೇ ಟಾಟಾ ಸನ್ಸ್‌ನ ಆಡಳಿತ ಮಂಡಳಿಯು ಮಿಸ್ತ್ರಿಯವರನ್ನು ಹುದ್ದೆಯಿಂದ ತೆಗೆದುಹಾಕಿ, ರತನ್ ಟಾಟಾ ಅವರನ್ನು ನಾಲ್ಕು ತಿಂಗಳ ಅವಧಿಗೆ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕಗೊಳಿಸಿತ್ತು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರತನ್ ಟಾಟಾ ಅವರು, ತನ್ನ ನೇಮಕವು ಅಲ್ಪಾವಧಿಯದಾಗಿದ್ದು, ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರವೇ ಆರಂಭಗೊಳ್ಳಲಿದೆ ಎಂದರು. ಸ್ಥಿರತೆಗಾಗಿ ಮತ್ತು ಅಧ್ಯಕ್ಷ ಹುದ್ದೆ ತೆರವಾಗಿರಕೂಡದು ಎಂಬ ಉದ್ದೇಶದಿಂದ ಮಧ್ಯಂತರ ಅಧ್ಯಕ್ಷನಾಗಿ ಹೊಣೆಯನ್ನು ವಹಿಸಿಕೊಂಡಿರುವುದಾಗಿ ಅವರು ತಿಳಿಸಿದರು.

ಕಂಪನಿಯ ಆಡಳಿತ ಮಂಡಳಿ ಮತ್ತು ಪ್ರಮುಖ ಶೇರುದಾರರು ಸಾಮೂಹಿಕ ವಿವೇಚನೆಯೊಂದಿಗೆ ಟಾಟಾ ಸನ್ಸ್ ಮತ್ತು ಟಾಟಾ ಸಮೂಹದ ದೀರ್ಘಾವಧಿಯ ಹಿತಾಸಕ್ತಿಗೆ ಸೂಕ್ತವಾಗಬಹುದಾದ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಕಂಪನಿಯ ವಕ್ತಾರರು ಸುದ್ದಿಗಾರರಿಗೆ ತಿಳಿಸಿದರು.

ಮಿಸ್ತ್ರಿ ಕುಟುಂಬಕ್ಕೆ ಸೇರಿದ ಪಲ್ಲೋಂಜಿ ಮಿಸ್ತ್ರಿ ಸಮೂಹವು ಟಾಟಾ ಸನ್ಸ್‌ನಲ್ಲಿ ಶೇ.18ರಷ್ಟು ಶೇರುಗಳನ್ನು ಹೊಂದಿದ್ದು, ಅತ್ಯಂತ ದೊಡ್ಡ ಶೇರುದಾರನಾಗಿದೆ. ಟಾಟಾ ಟ್ರಸ್ಟ್‌ಗಳು ಮತ್ತು ಟಾಟಾ ಸಮೂಹದ ಕೆಲವು ಕಂಪನಿಗಳು ಉಳಿದ ಶೇರುಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News