ಪಕ್ಷದಿಂದ ನಮ್ಮನ್ನು ಉಚ್ಛಾಟಿಸಲು ತಡವೇಕೆ ? ದೇವೇಗೌಡರಿಗೆ ಝಮೀರ್‌ ಅಹ್ಮದ್ ಪ್ರಶ್ನೆ

Update: 2016-10-25 13:51 GMT

ಬೆಂಗಳೂರು, ಅ.25: ಜೆಡಿಎಸ್ ಪಕ್ಷಕ್ಕೆ ನಮ್ಮ ಅಗತ್ಯವಿಲ್ಲದಿದ್ದರೆ, ನಮ್ಮನ್ನು ಉಚ್ಛಾಟನೆ ಮಾಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಯಾಕೆ ತಡ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನಮ್ಮನ್ನು ಉಳಿಸಿಕೊಳ್ಳುವಂತೆ ಕುಮಾರಸ್ವಾಮಿ ಎದುರು ಅರ್ಜಿ ಹಾಕಿಲ್ಲ. ನಮ್ಮನ್ನು ನಂಬಿಕೊಂಡಿರುವ ಲಕ್ಷಾಂತರ ಜನ ಕಾರ್ಯಕರ್ತರಿಗಾಗಿ ಈ ಕ್ಷಣದವರೆಗೂ ಪಕ್ಷದಲ್ಲಿದ್ದೇವೆ ಎಂದರು.

ಜೆಡಿಎಸ್ ಪಕ್ಷವು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನಿಯಂತ್ರಣದಲ್ಲೆ ಇದೆ. ನಮ್ಮನ್ನು ಈಗಾಗಲೆ ಅಮಾನತ್ತು ಮಾಡಲಾಗಿದೆ. ಪಕ್ಷಕ್ಕೆ ನಮ್ಮ ಅಗತ್ಯವಿಲ್ಲದಿದ್ದರೆ ನಮ್ಮನ್ನು ಹೊರ ಹಾಕಲು ಯಾಕೆ ಇಷ್ಟೊಂದು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರ ರೀತಿಯಲ್ಲಿ ರಾಜಕಾರಣವನ್ನು ನಂಬಿಕೊಂಡೆ ನಾನು ಜೀವನ ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕುಮಾರಸ್ವಾಮಿಗೆ ಹೇಳಿಯೆ ನಾವು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದೇವೆ. ಮಾಡಬಾರದ ತಪ್ಪನ್ನು ನಾವೇನು ಮಾಡಿಲ್ಲ. ಯಾವುದಾದರೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಬೇಕಾದರೂ ನಾವು ಸಿದ್ಧರಿದ್ದೇವೆ ಎಂದು ಝಮೀರ್‌ಅಹ್ಮದ್ ತಿಳಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ಎಂ. ಫಾರೂಕ್ ಕಾಂಗ್ರೆಸ್ ಪಕ್ಷದ ಹಿನ್ನೆಲೆಯಿಂದ ಬಂದವರು. ಅವರ ಬದಲು ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನಾವು ಖಂಡಿತವಾಗಿಯೂ ಬೆಂಬಲ ನೀಡುತ್ತಿದ್ದೇವು ಎಂದು ಝಮೀರ್‌ಅಹ್ಮದ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ವಕೀಲರೊಬ್ಬರಿಂದ ವಶಪಡಿಸಿಕೊಂಡಿದ್ದ 1.97 ಕೋಟಿ ರೂ.ನಗದು ಆಸ್ತಿ ಖರೀದಿಗೆ ತೆಗೆದುಕೊಂಡು ಹೋಗುತ್ತಿದ್ದದ್ದು ಎಂದು ತನಿಖೆ ನಡೆಸಿದಂತಹ ಪೊಲೀಸರೆ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ, ಈ ಹಣದ ಮೂಲದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮಾಹಿತಿಯಿದೆ ಎಂದು ಹೇಳುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.

ಜಬಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿಯೊಬ್ಬರು, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ವಿರುದ್ಧ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಸುಮ್ಮನೆ ‘ಹಿಟ್ ಅಂಡ್ ರನ್’ ಮಾಡುವುದು ಬೇಡ ಎಂದು ಝಮೀರ್ ಅಹ್ಮದ್ ಸಲಹೆ ನೀಡಿದರು.

ದಲಿತ ಪರ ಕಾಳಜಿಗೆ ವ್ಯಂಗ್ಯ: ಮಾಜಿ ಸಚಿವ ವಿ.ಶ್ರೀನಿವಾಸ್‌ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಕುಮಾರಸ್ವಾಮಿಗೆ ದಲಿತರ ಮೇಲೆ ಅಪಾರವಾದ ಕಾಳಜಿ ಹುಟ್ಟಿದೆ. ಹಾಗಿದ್ದಲ್ಲಿ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಲಿ, ಪಕ್ಷ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಅಂತ ಘೋಷಣೆ ಮಾಡಲಿ ಎಂದು ಅವರು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News