ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2016-10-25 16:56 GMT

ಶಿವಮೊಗ್ಗ, ಅ.25: ಶಿವಮೊಗ್ಗ ತಾಲೂಕಿನ ಹೊಳಲೂರು ಸಮೀಪದ ತುಂಗಭದ್ರಾ ನದಿಯಿಂದ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ಪೂರೈಕೆ ಮಾಡುವ ತುಂಗಭದ್ರಾ ಏತ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಹೊಳಲೂರು ಸಮೀಪ ಏತ ನೀರಾವರಿ ಯೋಜನೆಯಡಿ ನಿರ್ಮಿಸಲಾಗಿರುವ ಪಂಪ್‌ಹೌಸ್ ಹಾಗೂ ಪೈಪ್‌ಲೈನ್ ಕಾಮಗಾರಿಯ ಖುದ್ದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೊಳಲೂರು ಸುತ್ತಮುತ್ತಲಿನ ಭಾಗದ ರೈತರ ಅನುಕೂಲಕ್ಕಾಗಿ 2008ರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿತ್ತು. ಇದುವರೆಗೂ ಸುಮಾರು 13 ಕೋಟಿ ರೂ. ವೆಚ್ಚವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮೂಲಕ ಸರಕಾರ ಮತ್ತು ರೈತರಿಗೆ ವಂಚಿಸಲಾಗಿದೆ. ಸಂಬಂಧಿತ ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು. ಕಾಮಗಾರಿಯ ಗುತ್ತಿಗೆ ವಹಿಸಿರುವ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಗುತ್ತಿಗೆದಾರರು ಯೋಜನೆ ಸಲುವಾಗಿ ಇಟ್ಟಿರುವ ಇಎಂಡಿ ಠೇವಣಿ ಒಂದೂವರೆ ಕೋಟಿ ರೂ. ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ. ಸರಕಾರಕ್ಕೆ ಆಗಿರುವ ಹೆಚ್ಚುವರಿ ನಷ್ಟವನ್ನು ಗುತ್ತಿಗೆದಾರರಿಂದಲೇ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ಲೋಪವಾಗಿದೆ ಎಂಬುವುದರ ಮಾಹಿತಿ ತಿಳಿಯುತ್ತಿದ್ದಂತೆ ನೀರಾವರಿ ಇಲಾಖೆಯ ಮೂಲಕ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಅದರಂತೆ ತಾವೂ ಕೂಡ ಖುದ್ದು ಭೆೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ರೈತರಿಗೆ ಯೋಜನೆಯ ಪ್ರಯೋಜನ ಸಿಗುವಂತೆ ಮಾಡು ವುದಾಗಿ ಭರವಸೆ ನೀಡಿದರು.

ಮುಂದಿನ ಕ್ರಮ: ಕರ್ನಾಟಕ ಲೋಕಸೇವಾ ಆಯೋಗದಿಂದ ಪತ್ರಾಂಕಿತ ಅಧಿಕಾರಿಗಳ ನೇಮಕಾತಿ ರದ್ದು ಮಾಡಿದ ಸರಕಾರದ ಆದೇಶದ ಬಗ್ಗೆ ಮತ್ತು ಕರ್ನಾಟಕ ನ್ಯಾಯಾಧಿಕರಣದ ತೀರ್ಪಿನ ಕುರಿತು ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕಳೆದ ಎರಡು ದಿನಗಳಿಂದ ವಿವಿಧ ಜಿಲ್ಲೆಯ ಪ್ರವಾಸದಲ್ಲಿರುವುದರಿಂದ ತೀರ್ಪಿನ ಪ್ರತಿ ಓದಲು ಸಾಧ್ಯವಾಗಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ವಿಭಾಗದ ಶಾಸಕಿ ಶಾರದಾ ಪೂರ್ಯನಾಯಕ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಸ್ತುತ ವರ್ಷ ರಾಜ್ಯದಲ್ಲಿ ಅಪಾರ ಪ್ರಮಾಣದ ಈರುಳ್ಳಿ ಬೆಳೆದಿದ್ದು ಧಾರಣೆ ಕುಸಿತದಿಂದ ಸೂಕ್ತ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಈಗಾಗಲೇ ಪ್ರತಿ ಕೆಜಿ ಈರುಳ್ಳಿಗೆ 11 ರೂ. ನಿಗದಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಇಂದು ಅಥವಾ ನಾಳೆಯೊಳಗೆ ಈರುಳ್ಳಿಗೆ ಕೇಂದ್ರ ಸರಕಾರದಿಂದ ಬೆಲೆ ನಿಗದಿಯಾಗುವ ಸಾಧ್ಯತೆ ಯಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆದಿರುವ ರೈತರು ಬೆಲೆ ಕುಸಿತದ ಕಾರಣದಿಂದ ತಕ್ಷಣ ಮಾರುಕಟ್ಟೆಗೆ ಕೊಂಡು ಹೋಗಿ ಅಗ್ಗದ ಬೆಲೆಗೆ ಮಾರದೆ, ಒಂದೆರಡು ದಿನಗಳ ಕಾಲ ಕಾಯಿರಿ.

                 <ಟಿ.ಬಿ. ಜಯಚಂದ್ರ, ಸಚಿವ ಸಣ್ಣ ನೀರಾವರಿ ಇಲಾಖೆ

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಪರಿಸ್ಥಿತಿ ಮನೆ ಮಾಡಿದೆ. ಸರಿಸುಮಾರು 12 ಸಾವಿರ ಕೋಟಿ ರೂ. ಬೆಳೆ ನಷ್ಟ ಅಂದಾಜಿಸಲಾಗಿದೆ. ಈ ವಿಷಯವಾಗಿ ಕೇಂದ್ರ ಸರಕಾರಕ್ಕೆ ಪರಿಹಾರ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. ಶಿವಮೊಗ್ಗದಂತಹ ಸಮೃದ್ಧ ಮಲೆನಾಡಿನ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರಕಾರ ಚೆಕ್ ಡ್ಯಾಂಗಳೂ ಸೇರಿದಂತೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 76 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ .

<

 ಟಿ.ಬಿ. ಜಯಚಂದ್ರ ಸಚಿವಸಣ್ಣ ನೀರಾವರಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News