ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅವಸಾನ?

Update: 2016-10-25 18:34 GMT

ಸಮಾಜವಾದಿಗಳು ಪಕ್ಷ ಒಡೆಯುವರು ಎನ್ನುವ ಗುಮಾನಿಗೆ ಉತ್ತರ ಪ್ರದೇಶದ ಸದ್ಯದ ರಾಜಕೀಯ ಘಟನಾವಳಿಗಳು ಇಂಬು ಕೊಟ್ಟಿವೆ. ಸಮಾಜವಾದಿ ಪಕ್ಷ ಹಿಂದಿನ ನಾನಾ ಹೆಸರಿನ ಸೋಷಿಯಲಿಸ್ಟ್ ಪಕ್ಷಗಳ ಮತ್ತು ಸೋಷಿಯಲಿಸ್ಟರ್ ಕೂಸಾಗಿದ್ದು, ಅದು ಒಡೆಯುವುದು ಮತ್ತು ಆಂತರಿಕ ಗೊಂದಲದಲ್ಲಿ ಸಿಲುಕುವುದು, ಭಾರತದ ರಾಜಕೀಯ ಇತಿಹಾಸವನ್ನು ತಿಳಿದವರಿಗೆ ಹೊಸ ಸುದ್ದಿಯಲ್ಲ. ಆಚಾರ್ಯ ಜೆ.ಬಿ.ಕೃಪಲಾನಿ, ನರೇಂದ್ರ ದೇವ, ಮಧುಲಿಮೆಯೆ, ಎಚ್.ವಿ. ಕಾಮತ್, ಜಾರ್ಜ್ ಫೆರ್ನಾಡೀಸ್, ನಾಥ್ ಪೈ, ಮಧು ದಂಡವತೆ, ರಾಮ ಮನೋಹರ ಲೋಹಿಯಾ, ಗೋಪಾಲ ಗೌಡ, ಎನ್.ಜಿ. ಗೋರೆ ಮುಂತಾದ ಮಹಾನ್ ನಾಯಕರನ್ನು ರೂಪಿಸಿದ ಸಮಾಜವಾದಿ ಚಳವಳಿ, ಆಂತರಿಕ ಗೊಂದಲ ಮತ್ತು ಕಚ್ಚಾಟದಲ್ಲಿ ಒಂದು ಸಮರ್ಥ ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿಲ್ಲ. ಸೋಷಿಯಲಿಸ್ಟ್ ಪಕ್ಷ, ಪ್ರಜಾ ಸೋಷಿಯಲಿಸ್ಟ್ ಪಕ್ಷ, ಸಂಯುಕ್ತ ಸೋಷಿಯಲಿಸ್ಟ್ ಪಕ್ಷ, ಜನತಾ ಪಕ್ಷ, ಸಮಾಜವಾದಿ ಜನತಾ ಪಕ್ಷಗಳಾಗಿ ವಿಭಜನೆಯಾಗುತ್ತಾ ಹೋಗಿ ಕೊನೆಗೆ ಮುಲಾಯಂ ಸಿಂಗ್ ಯಾದವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷವಾಗಿ ಉತ್ತರ ಪ್ರದೇಶ ರಾಜ್ಯಕ್ಕೆ ಸೀಮಿತವಾದ ಪ್ರಾಂತೀಯ ಪಕ್ಷವಾಗಿ ದಶಕಗಳ ಕಾಲ ಬದುಕುಳಿದಿತ್ತು. ಈಗ ಅದೂ ಕೂಡಾ ವಿಭಜನೆಯಾಗುತ್ತಿದ್ದು, ಸಮಾಜವಾದಿ ಚಳವಳಿ ಮರಣಶಯ್ಯೆಯನ್ನು ತಲುಪಿದೆ.

 ಒಂದು ರಾಜಕೀಯ ಪಕ್ಷ ಒಡೆದಾಗ, ಅದಕ್ಕೆ ಕಾರಣರಾದವರು, ಸೈದ್ಧಾಂತಿಕ ಸಂಘರ್ಷದ ಬಣ್ಣ ಕೊಡುವುದು ಈ ದೇಶದಲ್ಲಿ ತೀರಾ ಸಾಮಾನ್ಯ. ಐವತ್ತರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾದಾಗ ತಾತ್ವಿಕ ಘರ್ಷಣೆ ಇತ್ತು. ಹಾಗೆಯೇ 1969ರಲ್ಲಿ ಕಾಂಗ್ರೆಸ್ ಪಕ್ಷ ಒಡೆದಾಗ ಕೂಡಾ ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿಯಂಥ ಸೈದ್ಧಾಂತಿಕ ವಿಷಯಗಳಿದ್ದವು. ಈ ಎರಡು ಅಪವಾದಗಳನ್ನು ಬಿಟ್ಟರೆ, ಕಳೆದ ಏಳು ದಶಕಗಳಲ್ಲಿ ನಡೆದ ರಾಜಕೀಯ ಪಕ್ಷಗಳ ವಿಭಜನೆ ಮತ್ತು ರಾಜಕೀಯ ಪಕ್ಷಗಳ ಧ್ರುವೀಕರಣದ ಹಿಂದಿನ ಕಾರಣವನ್ನು, ಉದ್ದೇಶವನ್ನು ಮತ್ತು ತೆರೆಮರೆಯ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅಧಿಕಾರ ಲಾಲಸೆ ಮತ್ತು ಕುಟುಂಬ ರಾಜಕಾರಣದ ದಟ್ಟ ಛಾಯೆ ಎದ್ದು ಕಾಣತ್ತದೆ. ಸದ್ಯ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ಯಾದವೀ ಕಲಹ’ ಕೂಡಾ ಈ ಪಟ್ಟಿಯಲ್ಲಿ ಕಾಣುತ್ತದೆ.
ಕಲಹದ ಹಿಂದೆ ಮುಲಾಯಂ ಸಿಂಗ್‌ರ ಕುಟುಂಬದವರೇ ಕಾರಣ ಎನ್ನುವುದು ಇನ್ನೊಂದು ವಿಶೇಷ. ಅಖಿಲೇಶ್ ಯಾದವ್ ಮುಲಾಯಂ ಸಿಂಗರ ಮೊದಲ ಪತ್ನಿಯ ಮಗ. ಮುಲಾಯಂ ಸಿಂಗ್‌ರ ಎರಡನೆ ಪತ್ನಿ ಸಾಧನಾ ಗುಪ್ತ ಅಖಿಲೇಶ್‌ರನ್ನು ವಿರೋಧಿಸುತ್ತಿದ್ದು, ಈ ಕಲಹದ ಹಿಂದೆ ತೆರೆಯಮರೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ತನ್ನ ಮಗ ಪ್ರತೀಕ್ ಮತ್ತು ಮಗಳು ಅಪರ್ಣಾರನ್ನು ಪಕ್ಷದಲ್ಲಿ ಮತ್ತು ಅಧಿಕಾರದಲ್ಲಿ ಮೇಲಕ್ಕೇರಿಸಲು ಭಾರೀ ಉತ್ಸುಕತೆ ತೋರಿಸುತ್ತಿದ್ದಾರೆ. 2012ರ ಚುನಾವಣೆಯಲ್ಲಿ ಪಕ್ಷ ಗೆದ್ದಾಗ, ಮುಖ್ಯಮಂತ್ರಿಯಾಗಲು ಶಿವಪಾಲ ಯಾದವ್ ತುದಿಗಾಲಿನಲ್ಲಿದ್ದರು.ಆದರೆ, ಬಹುಜನ ಶಾಸಕರ ಇಚ್ಛೆಯಂತೆ, ಮುಲಾಯಂ ಸಿಂಗ್‌ರು ಅಖಿಲೇಶ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು.

 ಶಿವಪಾಲ ಯಾದವರ ಕಮರಿದ ಈ ಆಶೆಯೇ, ಇಂದಿನ ರಾಜಕೀಯ ವಿಪ್ಲವಕ್ಕೆ ಕಾರಣ ಎಂದು ರಾಜಕೀಯ ಪಂಡಿತರು ವಾದಿಸುತ್ತಿದ್ದಾರೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಒಂದು ಕುಟುಂಬದಲ್ಲಿನ ದಾಯಾದಿ ಕಲಹ ಒಂದು ರಾಜಕೀಯ ಪಕ್ಷವನ್ನೇ ಆಹುತಿ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದು ಅತ್ಯಂತ ವಿನಾಶಕಾರಿ, ಆಘಾತಕಾರಿ ರಾಜಕೀಯ ಬೆಳವಣಿಗೆ.
ವಿಚಿತ್ರವೆಂದರೆ, ಒಂದೇ ಒಂದು ನೇರವಾದ ಚುನಾವಣೆ ಗೆಲ್ಲದ, ಕೇವಲ ಹಿಂದಿನ ಬಾಗಿಲ ಮೂಲಕ ಸಂಸತ್ತನ್ನು ಪ್ರವೇಶಿಸಿ ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿ ಮನಸ್ವೀ ಕೈಯಾಡಿಸುತ್ತಿರುವ, ‘‘ಪವರ್ ಬ್ರೋಕರ್’’ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿರುವ, ಹೇಳಿಕೊಳ್ಳುವಂಥ ಉದ್ಯಮ ನಡೆಸದೆ ಬೃಹತ್ ಉದ್ಯಮಿ ಎನ್ನುವ ಹೆಸರು ಪಡೆದುಕೊಂಡಿರುವ ರಾಜಕಾರಣಿ, ಅಮರ್ ಸಿಂಗ್‌ರ ಪಾತ್ರ, ಉತ್ತರ ಪ್ರದೇಶದ ಸದ್ಯದ ರಾಜಕೀಯ ವಿಪ್ಲವದಲ್ಲಿ ಕೇಳುತ್ತಿದೆ. ಅವರೇ ಸೂತ್ರಧಾರಿ ಎಂದೂ ಹೇಳಲಾಗುತ್ತಿದೆ. ಈ ಆರೋಪದ ಸತ್ಯಾಸತ್ಯತೆ ಏನೇ ಇರಲಿ, ರಾಜಕೀಯದಲ್ಲಿ ಗೊಂದಲ ಸೃಷ್ಟಿಸುವ, ಕೈಯಾಡಿಸುವ ಮತ್ತು ಆ ಮೇಲೆ ಪ್ಯಾಚ್ ಮಾಡಿ, ಅದರ ಲಾಭವನ್ನು ಪಡೆಯುವುದರಲ್ಲಿ ಅವರಿಗೆ ದೀರ್ಘ ಅನುಭವ ಮತ್ತು ಇತಿಹಾಸ ಇದೆ. ಜೈಲಿಗೆ ಹೊಗುವುದನ್ನು ತಪ್ಪಿಸಿದ ಅಮರ್ ಸಿಂಗ್‌ರನ್ನು ಮುಲಾಯಂ ಎಂದೂ ಕೈಬಿಡುವ ಸಾಧ್ಯತೆ ಇಲ್ಲ. ಅಮರ ಸಿಂಗ್‌ರನ್ನು ನೋಡಿದರೆ ಅಖಿಲೇಶ್ ಯಾದವರಿಗೆ ಆಗುವುದಿಲ್ಲ. ಈ ಸಮೀಕರಣವನ್ನು ಬಿಡಿಸುವುದು ಸುಲಭಸಾಧ್ಯವಲ್ಲ.
 ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪರಿಸ್ಥಿತಿ ‘ಹಿಂದಿರುಗಿ ಬಾರದ’ ಮಟ್ಟಕ್ಕೆ ತಲುಪಿದೆ. ಚುನಾವಣೆಯ ಮೊದಲೇ ಸಮಾಜವಾದಿ ಪಕ್ಷದ ಸರಕಾರ ಬೀಳುವ ಎಲ್ಲಾ ಸೂಚನೆಗಳು ನಿಚ್ಚಳವಾಗಿ ಕಾಣುತ್ತಿವೆ. ಪಕ್ಷ ಒಡೆಯುವಾಗ, ಒಡೆಯುವವರು, ಮಾತೃ ಪಕ್ಷದ ಹೆಸರಿಗೆ ‘ವಿಕಾಸ ಅಥವಾ ಪ್ರಗತಿ’ಯನ್ನು ಸೇರಿಸಿ ಹೊಸ ಪಕ್ಷ ಕಟ್ಟುವಂತೆ, ಸಮಾಜವಾದಿ ಪಕ್ಷಕ್ಕೆ ಈ ಹೆಸರುಗಳ್ನು ಸೇರಿಸಿ ಹೊಸ ಪಕ್ಷ ಕಟ್ಟುವ ತಯಾರಿ ನಡೆದಿದೆ. ಅಕಸ್ಮಾತ್ ರಾಜಿ ಸಂಧಾನ ನಡೆದು ತೇಪೆ ಹಾಕಿದರೂ, ಅದು ಬಹುಕಾಲ ನಡೆಯುವ ಕುರುಹುಗಳು ಕಾಣುತ್ತಿಲ್ಲ.

 ರೋಗಿ ಬಯಸಿದ್ದೂ ಹಾಲು...ವೈದ್ಯ ನೀಡಿದ್ದೂ ಹಾಲು ಎನ್ನುವಂತೆ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ತೆರೆ ಮರೆಯಲ್ಲಿ ನಿಂತು ಸಂಭ್ರಮಿಸುತ್ತಿವೆ. ಒಂದೆರಡು ಚುನಾವಣಾ ಪೂರ್ವ ಮತದಾರರ ಸಮೀಕ್ಷೆಗಳು ಸಮಾಜವಾದಿ ಪಕ್ಷಕ್ಕೆ ಮುನ್ನಡೆ ತೋರಿಸಿದ್ದು ಮತ್ತು ಅಖಿಲೇಶ್ ಯಾದವರನ್ನು ಹೆಚ್ಚು ಜನಪ್ರಿಯ ಮುಖ್ಯಮಂತ್ರಿ ಎಂದು ಬಿಂಬಿಸಿದ್ದು, ಸದ್ಯದ ಬೆಳವಣಿಗೆಗಳು ಈ ಎರಡು ಪಕ್ಷಗಳಿಗೆ ಬಯಸದೇ ಬಂದ ಭಾಗ್ಯವಾಗಿವೆ. ಈ ಎರಡೂ ಪಕ್ಷಗಳು ತೆರೆ ಮರೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ‘ಯಾದವೀ ಕಲಹ’ಕ್ಕೆ ತುಪ್ಪ ಸುರಿದರೆ ಆಶ್ಚರ್ಯವಿಲ್ಲ. ಗುರಿ ಸಾಧನೆಗೆ ರಾಜಕೀಯದಲ್ಲಿ ಯಾವುದೂ ನಿಷಿದ್ಧವಲ್ಲ. ಅಧಿಕಾರಕ್ಕಾಗಿ ಎರಡು ರಾಜಕೀಯ ಪಕ್ಷಗಳು ಹೊಂಚು ಹಾಕಿ ಕಾಯುತ್ತಿರುವಾಗ, ರಾಜಕೀಯದಲ್ಲಿ ಐದು ದಶಕಗಳ ಅನುಭವ ಇರುವ ಮುಲಾಯಂ ಸಿಂಗ್, ಅಧಿಕಾರವನ್ನು ಕೈಯೆತ್ತಿ ಕೊಡುವ ಮಾರ್ಗದಲ್ಲಿರುವುದು ಶೋಚನೀಯ ಬೆಳವಣಿಗೆ. ರಾಜಕಾರಣಿಗಳು ಒಮೊಮ್ಮೆ ತಮ್ಮ ಗೋರಿಯನ್ನು ತಾವೇ ತೋಡಿ ಕೊಳ್ಳುತ್ತಾರೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಡ ಎನ್ನಬಹುದು. ಪಕ್ಷದಲ್ಲಿ ಆಂತರಿಕ ಪ್ರಜಾಸತ್ತೆ ಇಲ್ಲದಿದ್ದರೆ ಏನಾಗಬಹುದು ಎನ್ನುವುದಕ್ಕೆ ಸಮಾಜವಾದಿ ಪಕ್ಷದ ಸದ್ಯದ ಬೆಳವಣಿಗೆ ಜೀವಂತ ಉದಾಹರಣೆ.

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News