ರೆಡ್ಡಿ ಪುತ್ರಿಯ ಅದ್ದೂರಿ ವಿವಾಹದ ಬಗ್ಗೆ ಏನು ಹೇಳುತ್ತಾರೆ ಸಚಿವ ರಮೇಶ್ ಕುಮಾರ್?

Update: 2016-10-26 03:54 GMT

ಬೆಂಗಳೂರು, ಅ.26: ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಿಣಿ ವಿವಾಹದ ಆಮಂತ್ರಣವೇ, ಈ ವಿವಾಹಕ್ಕೆ ಎಷ್ಟು ಖರ್ಚಾಗಬಹುದು ಎಂಬ ಸುಳಿವು ನೀಡುವಂಥದ್ದು. ಇದು ರಾಜ್ಯದಲ್ಲಿ ಮತ್ತೆ ಆಡಂಬರದ ವಿವಾಹ ನಿಷೇಧಿಸುವ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ. ಇಂಥ ಅದ್ದೂರಿ ವಿವಾಹಗಳನ್ನು ನಿಷೇಧಿಸುವ ಕಾನೂನು ಜಾರಿಗೆ ತರುವ ಅಗತ್ಯವನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಪಾದಿಸಿದ್ದಾರೆ.
"ವಿವಾಹ ವೆಚ್ಚಕ್ಕೆ ಮಿತಿ ವಿಧಿಸುವ ಸಂಬಂಧ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಶಾಸಕನಾಗಿ ನಾನು ಇಂಥ ವೆಚ್ಚ ನಿರ್ಬಂಧಿಸುವ ಬಗ್ಗೆ ಖಾಸಗಿ ಮಸೂದೆ ಮಂಡಿಸುವ ಪ್ರಯತ್ನ ನಡೆಸಿದ್ದೆ. ಆದರೆ ಇದು ಮುಂದುವರಿಯಲಿಲ್ಲ. ಆದರೆ ಇದೀಗ ಸಂಪುಟ ಸದಸ್ಯನಾಗಿ ಅದೇ ಪ್ರಸ್ತಾಪ ಮುಂದಿಡುತ್ತೇನೆ" ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ಇಂಥ ಅದ್ದೂರಿ ವಿವಾಹಕ್ಕೆ ಕಡಿವಾಣ ಹಾಕುವ ಸಲುವಾಗಿ ವಿಶೇಷ ತೆರಿಗೆ ವಿಧಿಸುವ ಬಗ್ಗೆ ಕುಮಾರ್, 2015ರ ನವೆಂಬರ್‌ನಲ್ಲಿ ಖಾಸಗಿ ಮಸೂದೆ ಮಂಡಿಸುವ ಪ್ರಯತ್ನ ಮಾಡಿದ್ದರು. ಈ ವಿಚಾರ ಇನ್ನೂ ಚರ್ಚೆಗೆ ಬರಬೇಕಿದೆ. ಸಿದ್ದರಾಮಯ್ಯ ಸರ್ಕಾರ 2014ರಲ್ಲೇ ಇಂಥ ಮಸೂದೆ ಮಂಡಿಸಲು ಮುಂದಾಗಿತ್ತು. ಆದರೆ ಸಮಾಜದಲ್ಲಿ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು.
"ನಾನು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ 1977ರಲ್ಲಿ ಸರಳ ವಿವಾಹವಾಗಿದ್ದೆ. ಆಡಂಬರದ ಪ್ರದರ್ಶನಕ್ಕೆ ವಿವಾಹವನ್ನು ವೇದಿಕೆಯಾಗಿ ಮಾಡಿಕೊಳ್ಳುವ ಮೂಲಕ ಸಮಾಜವನ್ನು ಅವಮಾನಿಸುವಂತಾಗಬಾರದು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News