ಕೋಟ್ಯಂತರ ರೂ. ಕಿಕ್ ಬ್ಯಾಕ್ ಪ್ರಕರಣ: ಯಡಿಯೂರಪ್ಪ ಸಹಿತ ಎಲ್ಲ ಆರೋಪಿಗಳು ದೋಷ ಮುಕ್ತ

Update: 2016-10-26 06:36 GMT

  ಬೆಂಗಳೂರು, ಅ.26: ಸುಮಾರು 40 ಕೋಟಿ ರೂ. ಕಿಕ್‌ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರಿಗೆ ಸಿಬಿಐನ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

  ನ್ಯಾಯಮೂರ್ತಿ ಆರ್.ಬಿ. ಧರ್ಮಗೌಡರ್ ನೇತೃತ್ವದ ಸಿಬಿಐನ ವಿಶೇಷ ನ್ಯಾಯಾಲಯ ಯಡಿಯೂರಪ್ಪರ ಇಬ್ಬರು ಪುತ್ರರು, ಅಳಿಯ ಹಾಗೂ ಜೆಎಸ್‌ಡಬ್ಲು ಅಧಿಕಾರಿಗಳ ವಿರುದ್ಧದ ಎಲ್ಲ ಆರೋಪಗಳನ್ನು ಖುಲಾಸೆಗೊಳಿಸಿದೆ. ಯಡಿಯೂರಪ್ಪ ವಿರುದ್ಧ ಕಿಕ್ ಬ್ಯಾಕ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ನ್ನು ಸಲ್ಲಿಸಿತ್ತು.
 
 ‘‘ಆರೋಪಿಗಳ ವಿರುದ್ಧದ ಎಲ್ಲ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ. ವಿಚಾರಣೆಯ ವೇಳೆ ಯಡಿಯೂರಪ್ಪರಿಗೆ 473 ಪ್ರಶ್ನೆಗಳನ್ನು ಕೇಳಲಾಗಿತ್ತು. ಸುಮಾರು 400 ಪುಟಗಳ ನ್ಯಾಯಾಲಯದ ತೀರ್ಪಿನ ಪ್ರತಿ ಇನ್ನಷ್ಟೇ ಸಿಗಬೇಕಾಗಿದೆ’’ ಎಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ತಿಳಿಸಿದ್ದಾರೆ.

‘‘ಕೋರ್ಟ್ ತೀರ್ಪಿನಿಂದ ಲಕ್ಷಾಂತರ ಬೆಂಬಲಿಗರಿಗೆ ಸಂತಸವಾಗಿದೆ. ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇತ್ತು. ಇದೀಗ ನನಗೆ ನ್ಯಾಯ ಸಿಕ್ಕಿದೆ. ರಾಜಕೀಯವಾಗಿ ನನಗೆ ಇದು ಅತ್ಯಂತ ಮಹತ್ವದ ತೀರ್ಪು’’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಇಲ್ಲಿನ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟ್‌ಗೆ ಪ್ರಕರಣದ ಆರೋಪಿಗಳಾದ ಯಡಿಯೂರಪ್ಪ, ಅವರ ಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಆಪ್ತ, ಮಾಜಿ ಶಾಸಕ ರೇಣುಕಾಚಾರ್ಯ, ಜಿಂದಾಲ್ ಸಂಸ್ಥೆಯ ಆರೋಪಿತ ಅಧಿಕಾರಿಗಳು ಹಾಜರಾಗಿದ್ದರು.
 2011ರಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಯಡಿಯೂರಪ್ಪ ವಿರುದ್ಧ ಕೋಟ್ಯಂತರ ರೂ. ಲಂಚ ಸ್ವೀಕರಿಸಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ವಿರುದ್ಧ ತಮ್ಮ ಪ್ರೇರಣಾ ಟ್ರಸ್ಟ್‌ಗೆ 20 ಕೋ.ರೂ. ದೇಣಿಗೆ ಪಡೆದಿರುವುದು ಹಾಗೂ ಸೌಥ್ ವೆಸ್ಟ್ ಮೈನಿಂಗ್ ಕಂಪೆನಿ ಹಾಗೂ ಜಿಂದಾಲ್ ಕಂಪೆನಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News