ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಜಿ.ಸತ್ಯವತಿ
ಚಿಕ್ಕಮಗಳೂರು, ಅ.26: ಅತೀ ಹೆಚ್ಚು ಶಬ್ದ ಬರುವಂತಹ ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತದೆ, ಇದಕ್ಕೆ ಸಾರ್ವಜನಿಕರು ಅವಕಾಶ ನೀಡದೆ ಪರಿಸರ ಸ್ನೇಹಿಯಾಗಿ ಹಣತೆ ಬೆಳಗಿಸುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲು ಜಿಲ್ಲಾಧಿಕಾರಿ ಜಿ.ಸತ್ಯವತಿ ಕರೆ ನೀಡಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಮಾರಾಟಗಾರರಿಗೆ ಮುಂಜಾಗ್ರತೆ ಕೈಗೊಳ್ಳಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪಟಾಕಿಗಳನ್ನು ದಾಸ್ತಾನು ಮಾಡುವ ಸ್ಥಳಗಳಲ್ಲಿ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿದೆ. ಆದ್ದರಿಂದ ಪಟಾಕಿಗಳ ಮಾರಾಟಗಾರರು ಸಾರ್ವಜನಿಕರಿಗೆ ಈ ಪಟಾಕಿಗಳನ್ನು ಮಾರಾಟ ಮಾಡಬಾರದು ಎಂದರು.
ಒಂದು ವೇಳೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು. ದೀಪಾವಳಿ ಹಬ್ಬದ ವೇಳೆಯಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣು ಸೇರಿದಂತೆ ದೇಹದ ಇತರ ಭಾಗಗಳಿಗೆ ಗಾಯ ಆಗುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಪೋಷಕರು ಸೂಕ್ತ ಎಚ್ಚರವಹಿಸಬೇಕು. ಪಟಾಕಿಗಳನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಪಟಾಕಿ ಮಳಿಗೆಗಳನ್ನು ನಿರ್ಮಿಸುವಾಗ ಬೆಂಕಿ ಹತ್ತಿಕೊಳ್ಳದ ಸಾಧನಗಳನ್ನು ಬಳಸಿ ನಿರ್ಮಿಸಬೇಕು. ಪಟಾಕಿಗಳ ಮಾರಾಟ ಮಾಡಲು ದೀಪಾ ನರ್ಸಿಂಗ್ ಹೋಂ ಮುಂಭಾಗದಿಂದ ಬೈಪಾಸ್ ರಸ್ತೆಗೆ ಕೂಡುವ ರಸ್ತೆಯಲ್ಲಿ ಅವಕಾಶ ನೀಡಲಾಗಿದೆ. ಪ್ರತೀ ಮಳಿಗೆಯ ಬಳಿ ಅಗ್ನಿ ನಂದಕ ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮ ತಪ್ಪದೇ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಎಸ್ಪಿಕೆ. ಅಣ್ಣಾಮಲೈ, ಜಿಪಂ ಸಿಇಒ ಡಾ.ಆರ್.ರಾಗಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಉಪಭಾಗಾಧಿಕಾರಿ ಸಂಗಪ್ಪಮತ್ತಿತರಿದ್ದರು.