ವಿಭಿನ್ನ ಚಿಂತನೆಯಿಂದ ಶ್ರೇಷ್ಠ ವಿಜ್ಞಾನಿಯಾಗಲು ಸಾಧ್ಯ: ಪ್ರೊ. ತಿಲಕರತ್ನೆ

Update: 2016-10-27 16:38 GMT

ವೀರಾಜಪೇಟೆ, ಅ.27: ಸತತ ಸಂಶೋಧನೆಯಿಂದ ಮಾತ್ರ ಸಾಧನೆ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶ್ರೀಲಂಕಾದ ಪ್ಯಾರಡೇನಿಯ ವಿಶ್ವ ವಿದ್ಯಾ ನಿಲಯದ ದಂತ ವಿಜ್ಞಾನ ವಿಭಾಗದ ಸಂಸ್ಥಾಪಕ ಮುಖ್ಯಸ್ಥ ಪ್ರೊ. ಡಬ್ಲ್ಯು.ಎಂ. ತಿಲಕರತ್ನೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿನ ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಗಸಕ್ಕೆ ಎಲ್ಲೆಯಿರಬಹುದು. ಆದರೆ ಸಾಧನೆಗೆ ಎಲ್ಲೆಯಿರಲು ಸಾಧ್ಯವಿಲ್ಲ. ವಿಭಿನ್ನವಾದ ಚಿಂತನೆಗಳನ್ನು ಹೊಂದಿರುವವರು ಮಾತ್ರ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾಗಲು ಸಾಧ್ಯ. ಪ್ರಪಂಚದಲ್ಲಿನ ವಿವಿಧ ದೇಶಗಳಲ್ಲಿನ ದಂತ ವಿಜ್ಞಾನ ಸಂಸ್ಥೆಗಳ ಸಹಯೋಗದಿಂದ ಸಂಶೋಧನೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ವಾಗಲಿದೆ. ಶ್ರೀಲಂಕಾದಂತಹ ಸಣ್ಣ ರಾಷ್ಟದಲ್ಲಿ ಪ್ರತಿವರ್ಷ ಹೊರ ಬರುವ ಪದವೀಧರರ ಸಂಖ್ಯೆ ಭಾರತದಂತಹ ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದಾಗ ತೀರಾ ಕಡಿಮೆ. ಇಂದು ಪ್ರಪಂಚದಾದ್ಯಂತ ಶಿಕ್ಷಣವೆನ್ನುವುದು ವಾಣಿಜ್ಯೀಕರಣ ಗೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಡೀನ್ ಡಾ. ಸುನೀಲ್ ಮುದ್ದಯ್ಯಮಾತನಾಡಿ, ಯುರೋಪ್, ಉತ್ತರ ಅಮೆರಿಕ ಹಾಗೂ ಆಗ್ನೇಯ ಏಷ್ಯದ ರಾಷ್ಟ್ರಗಳೊಂದಿಗಿನ ಒಡಂಬಡಿಕೆ ಫಲವಾಗಿ ಅಲ್ಲಿನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಇಂದು ಕೊಡಗು ದಂತ ವೈದ್ಯಕೀಯ ಕಾಲೇಜಿಗೆ ಸತತ ಭೇಟಿ ನೀಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳ ಭೇಟಿ ಹಾಗೂ ಉಪನ್ಯಾಸದಂತಹ ಕಾರ್ಯಕ್ರಮಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗ ವಾಗುತ್ತಿದೆ.

ಕಾಲೇಜಿನಲ್ಲಿ ದಂತ ವೈದ್ಯಕೀಯ ಕ್ಷೇತ್ರದ ಎಲ್ಲ 9 ವಿಭಾಗದ ಸ್ನಾತಕೋತ್ತರ ತರಗತಿಗಳು ಲಭ್ಯವಿದ್ದು, ಹಲವಾರು ಹೆಸರಾಂತ ದಂತ ವೈದ್ಯರು, ಪ್ರಾಧ್ಯಾಪಕರುಹಾಗೂ ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.

ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಗಳಿಗೆ ಸಮಾರಂಭದಲ್ಲಿ ಪದವಿಯನ್ನು ಪ್ರದಾನ ಮಾಡಲಾ ಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದ ಶ್ರೀಲಂಕಾದ ಪ್ಯಾರಡೇನಿಯ ವಿಶ್ವ ವಿದ್ಯಾನಿಲಯದ ದಂತ ವಿಜ್ಞಾನ ವಿಭಾಗದ ಪ್ರೊ. ಅರುಣಿ ತಿಲಕರತ್ನೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಕಾಲೇಜಿನ ಪ್ರಾಂಶುಪಾಲ ಪೊನ್ನಪ್ಪ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ನಾತಕೊತ್ತರ ವಿಭಾಗದಲ್ಲಿ ರಾಮ್ ಪ್ರಕಾಶ್, ಸ್ನಾತಕ ವಿಭಾಗದಲ್ಲಿ ದಿವ್ಯಾಶ್ರೀ ಹಾಗೂ ಸಮಗ್ರ ಸಾಧನೆಗೆ ಗೌತಮಿ ಚಿನ್ನದ ಪದಕವನ್ನು ಗಳಿಸಿದರು. ಚಿನ್ನದ ಪದಕವನ್ನು ಕಾಲೇಜಿನ ಟ್ರಸ್ಟಿ ಕಂಜಿತಂಡ ಎಂ. ಕುಶಾಲಪ್ಪವಿತರಿಸಿದರು.

ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿ ಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಜಿತಿನ್ ಜೈನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News