×
Ad

ಹಣತೆ ಹಚ್ಚೋಣ, ಪಟಾಕಿ ತ್ಯಜಿಸೋಣ'

Update: 2016-10-27 22:12 IST

ಮಡಿಕೇರಿ ಅ.27: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಪರಿಸರಸ್ನೇಹಿ ದೀಪಾವಳಿ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನವನ್ನು ನಡೆಸಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ ವತಿಯಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ 750 ಕ್ಕೂ ಶಾಲಾ ಮಕ್ಕಳು ಪಾಲ್ಗೊಂಡು ಗಮನ ಸೆಳೆದರು.

  ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜು, ದೀಪಾವಳಿಯ ಸಂದಭರ್ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಈ ಆಂದೋಲನ ಸಹಕಾರಿಯಾಗಿದೆ ಎಂದರು.

ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕ್ರಮವಹಿಸುವಂತೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಇದೇ ಮೊದಲ ಬಾರಿಗೆ ಪರಿಸರ ಜಾಗೃತಿ ಆಂದೋಲನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

 ಪರಿಸರಸ್ನೇಹಿ ದೀಪಾವಳಿ ಆಚರಣೆ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ವಿಜ್ಞ್ಞಾನ ಪರಿಷತ್‌ನ ಪರಿಸರ ಜಾಗೃತಿ ಆಂದೋಲನದ ಸಂಚಾಲಕರೂ ಆದ ಕಾರ್ಯಕ್ರಮ ಸಂಘಟಕ, ಪರಿಸರ ಮಿತ್ರ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪಟಾಕಿ ಸಿಡಿಸುವುದರಿಂದ ಹಣದ ದುಂದುವೆಚ್ಚದ ಜೊತೆಗೆ ಪರಿಸರ ಮತ್ತು ಆರೋಗ್ಯಕ್ಕೆ ಹಾನಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜೊತೆಗೆ ಹಾನಿಕಾರಕವಾದ ಅಂಧತ್ವದ ಅಪಾಯಗಳನ್ನು ಸೃಷ್ಟಿಸುವ ಪಟಾಕಿಯನ್ನು ಬಿಟ್ಟು ದೀಪಾವಳಿ ಆಚರಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕಿದೆ ಎಂದರು.

  'ಹಣತೆ ಹಚ್ಚೋಣ -ಪಟಾಕಿ ತ್ಯಜಿಸೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಪಟಾಕಿ ಸಿಡಿತದಿಂದ ಆಗುವ ಅನಾಹುತಗಳ ಬಗ್ಗೆ ಜಿಲ್ಲಾ ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಡಾ. ಸಿ.ಆರ್. ಪ್ರಶಾಂತ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೇಗೌಡ, ರೋಟರಿ ಮಿಸ್ಟಿ ಹಿಲ್ಸ್ ನ ಉಪಾಧ್ಯಕ್ಷ ರಾಮಚಂದ್ರ ಮೊಗೂರು, ಕಾರ್ಯದರ್ಶಿ ಡಾ.ಎನ್. ಎಸ್. ನವೀನ್, ಶಾಲೆಯ ಮುಖ್ಯ ಶಿಕ್ಷಕ ಕೆ.ಎ. ಜಾನ್ಸನ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಡಿ.ಎ. ಮೋಹನ್, ಎಚ್.ಜೆ. ಕುಮಾರ್, ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಹನೀಫ್, ಎಸ್.ನಾಗರಾಜ್, ಸಿ.ಎಸ್. ಸುರೇಶ್, ಪಿ.ಆರ್. ಅಯ್ಯಪ್ಪ, ಚಂದ್ರಹಾಸ್, ಶಾಲಾ ಶಿಕ್ಷಕರು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News