ವೃತ್ತಕ್ಕೆ ಅಂಬೇಡ್ಕರ್ ಹೆಸರು ತಿರಸ್ಕರಿಸಿ ಎಸ್.ಬಂಗಾರಪ್ಪ ಹೆಸರಿಡಲು ಮುಂದಾದ ಪಪಂ
ಸೊರಬ, ಅ. 27: ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ದೇಶವೇ ಗೌರವ ನೀಡುವ ಸಂದಭರ್ದಲ್ಲಿ ಪಟ್ಟಣ ಪಂಚಾಯತ್ ಆಡಳಿತ ಪಟ್ಟಣ ಪಂಚಾಯತ್ ಮುಂಭಾಗದ ವೃತ್ತಕ್ಕೆ ಅಂಬೇಡ್ಕರ್ ಅವರ ಹೆಸರಿನ ಬದಲು ಬಂಗಾರಪ್ಪಅವರ ಹೆಸರಿಡಲು ಸಭೆೆಯಲ್ಲಿ ನಿರ್ಣಯ ಕೈಗೊಂಡು ಅನುಮೋದನೆಗೆ ಕಳುಹಿಸಿರುವ ಕ್ರಮ ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಪಂ. ಮುಂಭಾಗದ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡಲು ನಿರಾಕರಿಸುತ್ತಿರುವ ಪಟ್ಟಣ ಪಂಚಾಯತ್ ಆಡಳಿತದ ವಿರುದ್ಧ ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿಗೆ ನಮ್ಮ ವಿರೋಧವಿಲ್ಲ. ಅವರು ಹಿಂದುಳಿದ ವರ್ಗದವರ ನಾಯಕರಾಗಿದ್ದರು. ಆದರೆ, ಈ ಹಿಂದಿನಿಂದಲೂ ಪಪಂ ಮುಂಭಾಗದಲ್ಲಿನ ವೃತ್ತಕ್ಕೆ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವಂತೆ ಡಿಎಸ್‌ಎಸ್ ವತಿಯಿಂದ ಅನೇಕ ಹೋರಾಟ ಮಾಡಲಾಗಿದೆ. ಪಪಂ ಆಡಳಿತ ರಾಜಕಾರಿಣಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಅಂಬೇಡ್ಕರ್ ಅವರ ಹೆಸರನ್ನು ಕಡೆಗಣಿಸಿ, ದಲಿತ ವಿರೋಧಿ ನೀತಿ ಅನುಸರಿಸುವ ಮೂಲಕ ಬಂಗಾರಪ್ಪ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಲು ಹೊರಟಿರುವುದು ಅಂಬೇಡ್ಕರ್ ಅವರ ಹೆಸರಿಗೆ ಅಗೌರವ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಪಂ ಯಾರದೋ ಒತ್ತಡಕ್ಕೆ ಮಣಿದು ವೃತ್ತಕ್ಕೆ ಬಂಗಾರಪ್ಪ ಹೆಸರಿಡಲು ನಿರ್ಣಯ ತೆಗೆದುಕೊಂಡಿರಬಹುದು. ಆದರೆ ಅಂಬೇಡ್ಕರ್ ಹೆಸರಿಡುವವರೆಗೂ ನಮ್ಮ ಹೋರಾಟವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು, ಈ ಬಗ್ಗೆ ಪಂಚಾಯತ್ ಸ್ಪಷ್ಟ ನಿಲುವು ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿ ಕಾಗೋಡು ತಿಮ್ಮಪ್ಪ ಮಧ್ಯಪ್ರವೇಶಿಸಿ ಪಪಂ ವೃತ್ತಕ್ಕೆ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಂತ್ರಿಗಳ ಭಾಗವಹಿಸುವ ಕಾರ್ಯಕ್ರಮದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ಪಳನಿರಾಜ್, ಪ್ರಕಾಶ್ ಲಿಗಾಡಿ, ಗುರುರಾಜ್, ತಾಲೂಕು ಸಂಚಾಲಕರಾದ ರುದ್ರಪ್ಪ ಬೈರೇಕೊಪ್ಪ, ನರೇಂದ್ರ, ತಾಪಂ ಸದಸ್ಯ ಹನುಮಂತಪ್ಪ, ಪ್ರಮುಖರಾದ, ಬಿ.ಬಂಗಾರಪ್ಪ ನಿಟ್ಟಕ್ಕಿ, ನಾಗರಾಜ ಹುರುಳಿಕೊಪ್ಪ, ನಾಗರಾಜ ಕಾಸರುಗುಪ್ಪೆ, ಶುಭಕರ್, ಹರೀಶ್, ಶ್ಯಾಮಣ್ಣ ತುಡಿನೀರು, ಹರೀಶ್ ಚಿಟ್ಟೂರು, ಚಂದ್ರಪ್ಪ, ಮಹೇಶ್ ಶಕುನವಳ್ಳಿ, ಮಂಜುನಾಥ್, ತಿಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.