×
Ad

ಅಪೂರ್ಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ

Update: 2016-10-27 22:15 IST

 ಕಾರವಾರ, ಅ.27: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಇನ್ನೂ ಪ್ರಾರಂಭ ಮಾಡದಿರುವ ಕಾಮಗಾರಿಗಳನ್ನು ಕೈಬಿಟ್ಟು ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸದರಿ ಯೋಜನೆಯಡಿ ಯಾವುದೇ ಹೊಸ ಕಾಮಗಾರಿಯನ್ನು ಕೈಗೊಂಡಿಲ್ಲ. 2012-13ನೆ ಸಾಲಿನಲ್ಲಿ ಒಟ್ಟು 1,977ಕಾಮಗಾರಿಗಳಿಗೆ ಜಿಲ್ಲೆಯಲ್ಲಿ ಅನುಮೋದನೆ ನೀಡಲಾಗಿತ್ತು. ಕಳೆದ ಮಾರ್ಚ್ ತಿಂಗಳವರೆಗೆ 678 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗಿರುವ ಕಾಮಗಾರಿಗಳಿಗೆ ಮಾತ್ರ ಹಣ ಪಾವತಿ ಮಾಡಬೇಕು ಎಂದು ಸೂಚಿಸಿದರು.

ಇಲಾಖೆಯ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳ ಸಮರ್ಪಕ ಅನುಷ್ಠಾನಗೊಂಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಮುಂದುವರಿದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡಿ ಅನುದಾನ ವೆಚ್ಚ ಮಾಡಲಾಗುತ್ತಿದೆ. ಹಿಂದಿನ ಸಾಲಿನಲ್ಲಿ ಅನುಷ್ಠಾನ ಸಮರ್ಪಕವಾಗಿ ಮಾಡದ ಕಾರಣ ಅನುದಾನ ವಾಪಸ್ ಹೋಗಿರುವ ಕಾರಣ ಈ ತೊಂದರೆ ಎದುರಾಗಿದೆ. ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸುಮಾರು 200ಕೋಟಿ ರೂ. ಬೇಕಾಗಿದ್ದು, ಮುಂದಿನ ಐದು ವರ್ಷಗಳು ಕಳೆದರೂ ಈ ಕಾಮಗಾರಿಗಳು ಪೂರ್ಣಗೊಳ್ಳುವುದಿಲ್ಲ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಜಯಶ್ರೀ ಮೊಗೇರ, ಕಾಮಗಾರಿಗಳ ತಾಲೂಕುವಾರು ವಿವರಗಳನ್ನು ಶೀಘ್ರ ಒದಗಿಸಬೇಕು. ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಕುರಿತು ಮುಂದಿನ 10ದಿನಗಳ ಒಳಗಾಗಿ ಪ್ರತ್ಯೇಕ ಸಭೆ ನಡೆಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಅರಣ್ಯ ಹಕ್ಕು ಸಮಿತಿ:   

ಗ್ರಾಮ ಅರಣ್ಯ ಸಮಿತಿಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಪಿಡಿಒಗಳಿಗೆ ಇರುವುದಿಲ್ಲ. ಗ್ರಾಮ ಅರಣ್ಯ ಸಮಿತಿ ತಿರಸ್ಕರಿಸಿದರೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಕುರಿತು ಎಲ್ಲ ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಸಭೆ ತಿಳಿಸಿದರು.

ಇ ಸ್ವತ್ತು ಕುರಿತಾಗಿ ಎಲ್ಲ ಪಿಡಿಒಗಳಿಗೆ ಡಿಸೆಂಬರ್ 10ರ ಒಳಗಾಗಿ ತರಬೇತಿಯನ್ನು ನೀಡಲಾಗುವುದು. ಇ ಸ್ವತ್ತು ಅನುಷ್ಠಾನ ಕುರಿತಾಗಿರುವ ಎಲ್ಲ ಗೊಂದಲಗಳನ್ನು ಈ ಮೂಲಕ ಬಗೆಹರಿಸಲಾಗುವುದು ಎಂದು ನಾಯಕ್ ಹೇಳಿದರು.

ಸಭೆಗೆ ಕರೆಯಬೇಕಿಲ್ಲ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಇನ್ನಾವುದೇ ಜನಪ್ರತಿನಿಧಿಗಳನ್ನು ಕರೆಯಬೇಕಿಲ್ಲ. ಈ ಅಂಶ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಗ್ರಾಮ ಸಭೆಗೆ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರನ್ನು ಕರೆಯಬೇಕು ಎಂದು ಅವರು ಈ ಕುರಿತಾಗಿ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಸ್ಪಷ್ಟೀಕರಣ ನೀಡಿದರು.

  

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ತಿಪ್ಪಣ್ಣ ಪಾಟೀಲ್, ಶಿವಾನಂದ ಹೆಗಡೆ, ಬಸವರಾಜ ದೊಡ್ಮನಿ, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News