'ಡಿ' ಗ್ರೂಪ್‌ಗೆ ನೇರ ನೇಮಕಾತಿ ವಿರೋಧಿಸಿ ಧರಣಿ
ಚಿಕ್ಕಮಗಳೂರು, ಅ.27: ಬಿಸಿಎಂ ಇಲಾಖೆ ಶಾಲೆ ಮತ್ತು ವಸತಿ ನಿಲಯಗಳಲ್ಲಿ 'ಡಿ' ಗ್ರೂಪ್ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಹೊರಟಿರುವ ಸರಕಾರದ ಕ್ರಮವನ್ನು ವಿರೋಧಿಸಿ, ನೇರ ನೇಮಕಾತಿ ಮತ್ತು ಗುತ್ತಿಗೆ ಪದ್ಧ್ದತಿಯನ್ನು ರದ್ದುಪಡಿಸಲು ಒತ್ತಾಯಿಸಿ ಎಲ್ಲ ಹೊರಗುತ್ತಿಗೆ ನೌಕರರನ್ನು ದಿನಗೂಲಿ ನೌಕರರನ್ನಾಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಶಾಲೆ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿಯ ಒಕ್ಕೂಟವು ಗುರುವಾರ ಆಝಾದ್ ಪಾರ್ಕ್‌ನಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ರಾಜ್ಯಾದ್ಯಂತ ಸರಕಾರದ ವಿವಿಧ ಇಲಾಖೆಗಳಲ್ಲಿ ಕಳೆದ 10-15 ವರ್ಷಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಹಾಸ್ಟೆಲ್ ಉದ್ದಿಮೆಗಳಲ್ಲಿ ಹೆಚ್ಚು ಈ ಕೆಲಸಗಾರರನ್ನೆಲ್ಲಾ ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವುದೇ ವಿದ್ಯಾಭ್ಯಾಸವನ್ನು ಕಡ್ಡಾಯಗೊಳಿಸದೆ ಸರಕಾರ ದುಡಿಸಿಕೊಳ್ಳುತ್ತಿದೆ. ಆದರೆ ಈಗ ನೇರ ನೇಮಕಾತಿ ಹೆಸರಿನಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸುವ ಹುನ್ನಾರ ನಡೆದಿದೆ. ಈ ನೇರ ನೇಮಕಾತಿಯಿಂದ ಅನೇಕ ಸಮಸ್ಯೆಗಳು ಎದುರಾಗಲಿದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಎಲ್ಲ ಕೆಲಸಗಾರರನ್ನು ಕರ್ನಾಟಕ ಡೈಲಿವೇಜಸ್ ಎಂಪ್ಲಾಯೀಸ್ ವೆಲ್ಫೇರ್ ಆ್ಯಕ್ಟ್ 2012 ಅಡಿಯಲ್ಲಿ ಈ ಕೆಲಸ ಮಾಡುತ್ತಿರುವ ಕೆಲಸಗಾರರನ್ನು ಖಾಯಂ ಮಾಡುವುದರಿಂದ ಸರಕಾರಕ್ಕೆ ಕಾನೂನಿನ ಯಾವುದೇ ತೊಡಕು ಬರುವುದಿಲ್ಲ. ಹಾಲಿ ಕೆಲಸಗಾರರಿಗೆ ಬದುಕು ಕಟ್ಟಿಕೊಟ್ಟಂತಾಗುತ್ತದೆ. ಈಗಾಗಲೇ ರಾಜ್ಯ ಪೌರ ಕಾರ್ಮಿಕರಿಗೂ ಆಯಾಯ ಇಲಾಖೆಯಿಂದ ಸಂಬಳ ಕೊಡುವ ರೀತಿಯಲ್ಲಿ ನಿಯಮವನ್ನು ಜಾರಿಗೆ ತರಬಹುದಾಗಿದೆ. ಅನುಭವಿ ಕೆಲಸಗಾರರನ್ನು ಈ ಘನ ಸರಕಾರ ಗುರುತಿಸುವ ಜತೆಗೆ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಬದುಕಿಗಾಗಿ ಹೋರಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅ.17ರಿಂದಲೇ ಅಹೋರಾತ್ರಿ ಚಳವಳಿ ಆರಂಭಿಸಲಾಗಿದೆ. ನ.7ರಂದು ಸಮಾಜಕಲ್ಯಾಣ ಸಚಿವರ ತವರು ಜಿಲ್ಲೆಯಲ್ಲಿ ಧರಣಿ ನಡೆಸಲಾಗುವುದು. ಸಚಿವರಿಂದ ಪ್ರತಿಕ್ರಿಯೆ ಬಾರದಿದ್ದರೆ ನ.8ರಂದು ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಾಲೆ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿ ಒಕ್ಕೂಟ ಅಧ್ಯಕ್ಷೆ ರಾಧಾ ಸುಂದರೇಶ್, ಸುರೇಶ್, ಬಿಸಿಎಂ ಹೇಮಂತ್, ರವಿಕುಮಾರ್, ಅರುಣಾಕ್ಷಿ, ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.