ಭದ್ರಾ ಅಭಯಾರಣ್ಯದಲ್ಲಿ ಮೋಜು ಮಸ್ತಿ

Update: 2016-10-27 16:47 GMT

ಚಿಕ್ಕಮಗಳೂರು, ಅ.27: ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯ, ಭದ್ರಾ ಹಿನ್ನೀರು ವ್ಯಾಪ್ತಿಯ ಸಾವೆ ಬೇಟೆ ನಿಗ್ರಹ ಶಿಬಿರದಲ್ಲಿ ಅ.19ರಂದು ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಶಿವುಕಿರಣ್ ಮತ್ತು 10 ಮಂದಿ ಸ್ನೇಹಿತರ ತಂಡವೊಂದು ಬೇಟೆ ನಿಗ್ರಹ ಶಿಬಿರದಲ್ಲಿ ಪಾರ್ಟಿ ಮಾಡಿ, ಮೋಜು-ಮಸ್ತಿ ಮಾಡಿದ್ದಾರೆ ಎಂದು ಉಪ್ಪಾರಬೀರನಹಳ್ಳಿ, ಲಕ್ಕವಳ್ಳಿ ಭಾಗದ ನಿಸರ್ಗ ಪ್ರೇಮಿಗಳು, ವನ್ಯಜೀವಿ ಪ್ರೇಮಿಗಳು, ಗ್ರಾಮಸ್ಥರು ಆರೋಪಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

  ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಬಾಡೂಟ ತಯಾರಿಸಿ, ಮದ್ಯ ಸೇವಿಸುತ್ತಾ ದಿನವಿಡೀ ಪಾರ್ಟಿ ಮಾಡಿದ್ದಾರೆ. ಲಕ್ಕವಳ್ಳಿ ವಲಯದಲ್ಲಿ ಇತ್ತೀಚೆಗೆ 10 ಮಂದಿಯ ತಂಡ ವನ್ಯಜೀವಿ ವೀಕ್ಷಣೆಗೆ ಸಫಾರಿ ಹೋಗಲು ಸರಕಾರಿ ವಾಹನವನ್ನು ಬಳಸಿದ್ದು, ಅದರಲ್ಲಿ ಗ್ರಾಪಂ ಅಧ್ಯಕ್ಷರ ಮತ್ತು ಗೆಳೆಯರ ತಂಡವನ್ನು ವಲಯಾರಣ್ಯಾಧಿಕಾರಿಗಳಾದ ಚಂಗಪ್ಪಸಫಾರಿ ವೀಕ್ಷಣೆಗೆ ಮತ್ತು ಬೇಟೆ ನಿಗ್ರಹ ಶಿಬಿರದಲ್ಲಿ ಪಾರ್ಟಿ ವ್ಯವಸ್ಥೆ ಮಾಡಿ ಕಳುಹಿಸಿರುವುದು ದುರಂತಕ್ಕೆ ಕಾರಣವಾಗಿದೆ. ಸಫಾರಿ ವೀಕ್ಷಣೆ ಕೇವಲ 10 ಕಿ.ಮೀ. ವ್ಯಾಪ್ತಿ ನಿಗದಿಪಡಿಸಲಾಗಿದೆ. ಆದರೆ 25 ಕಿ.ಮೀ. ದೂರದಲ್ಲಿರುವ ಭದ್ರಾ ಹಿನ್ನೀರಿನ ಸಾವೆ ಬೇಟೆ ನಿಗ್ರಹ ಶಿಬಿರ ಕೋರ್‌ರೆನ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಾರ್ವಜನಿಕರಿಗೂ ಹಾಗೂ ಪ್ರವಾಸಿಗರಿಗೆ ನಿಷೇಧವಿದೆ. ಇಷ್ಟಾದರೂ ಶಿಬಿರದಲ್ಲಿ ಮದ್ಯಪಾನ, ಬಾಡೂಟ, ಮೋಜು-ಮಸ್ತಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದಿದ್ದಾರೆ. ಇಲಾಖಾ ಸಿಬ್ಬಂದಿ ಮೇಲೆ ಹಲ್ಲೆ, ದಾಂಧಲೆ:

  

ಸಾವೆ ಶಿಬಿರದಿಂದ ಹೊರಟ ಅಧ್ಯಕ್ಷರ ಗುಂಪು ನೇರವಾಗಿ ಅಭಯಾರಣ್ಯದ ಮಧ್ಯದಲ್ಲಿರುವ ಸುಕ್ಕಲಹಟ್ಟಿ ಇಲಾಖಾ ಬಂಗಲೆ ಮತ್ತು ಬೇಟೆ ನಿಗ್ರಹ ಶಿಬಿರಕ್ಕೆ ತೆರಳಿ ಅಲ್ಲಿದ್ದ ಬೇಟೆ ನಿಗ್ರಹ ಶಿಬಿರದ ಸಿಬ್ಬಂದಿಗೆ ಹಿಗ್ಗಾಮುಗ್ಗ ಹಲ್ಲೆ ಮಾಡಿರುತ್ತಾರೆ. ಅರಣ್ಯ ರಕ್ಷಕ ಬೀರೆಂದ್ರ, ವಾಚರ್‌ಗಳಾದ ಶಿವಮೂರ್ತಿ, ರಮೇಶ, ಸುನೀಲಾ ಮತ್ತು ವಾಹನ ಚಾಲಕ ಪ್ರತಾಪ ಹಲ್ಲೆಗೊಳಗಾಗಿರುತ್ತಾರೆ. ಇದಾದ ನಂತರ ಈ ಗುಂಪು ದಾಂಧಲೆ ಮುಂದುವರಿಸುತ್ತ ಭದ್ರಾ ಜಂಗಲ್ ರೆಸಾರ್ಟ್‌ಗೂ ಹೋಗಿ ಪೀಠೋಪಕರಣಗಳನ್ನು ಹೊಡೆದು ದಾಂಧಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ತನಿಖೆ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ: ಸಣ್ಣ ಸಣ್ಣ ವಿಚಾರಕ್ಕೂ ದೂರು ದಾಖಲಿಸುವ ಅರಣ್ಯ ಅಧಿಕಾರಿಗಳು ಇಷ್ಟು ದೊಡ್ಡ ಅಪರಾಧ ನಡೆದಿದ್ದರೂ ಕೂಡ ಅಪರಾಧಕ್ಕೆ ಸಹಕರಿಸಿ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆ ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ನಂತರ ವಲಯ ಅರಣ್ಯಾಧಿಕಾರಿ ಚಂಗಪ್ಪ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣುಬಸಪ್ಪಪ್ರಕರಣವನ್ನು ಮುಚ್ಚಿಹಾಕಿ ರಾಜಿ ಸಂಧಾನ ಮಾಡಿದ್ದಾರೆ. ಈ ಸಂಬಂಧ ತನಿಖೆಯಾಗಬೇಕು. ಅಭಯಾರಣ್ಯದ ನಿಷೇಧಿತ ಪ್ರದೇಶದಲ್ಲಿ ತೆರಳಿ ಪಾರ್ಟಿ ಮಾಡಲು ಅನುವು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವಾಗಬೇಕು. ಕರ್ತವ್ಯನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಗ್ರಾಪಂ ಅಧ್ಯಕ್ಷ ಮತ್ತು ಅವರ ತಂಡದ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News