ಖಾಸಗಿ ಆಸ್ಪತ್ರೆಗಳ ಬೇಕಾಬಿಟ್ಟಿ ವಸೂಲಿಗೆ ಕಡಿವಾಣ: ಆರೋಗ್ಯ ಸಚಿವ ರಮೇಶ್‌ಕುಮಾರ್
ಬೆಂಗಳೂರು, ಅ. 27: ಆರೋಗ್ಯ ಸೇವೆ ಹೆಸರಿನಲ್ಲಿ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳ ಬೇಕಾಬಿಟ್ಟಿ ವಸೂಲಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು ತಿದ್ದುಪಡಿ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯಕೀಯ ಸಂಸ್ಥೆಗಳು ರೋಗಿಗಳ ಅಸಹಾಯಕತೆ ಬಂಡವಾಳ ಮಾಡಿಕೊಂಡು ದುಬಾರಿ ಮೊತ್ತದ ಹಣ ವಸೂಲಿ ಸಂಬಂಧ ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಹೊಸ ಶಾಸನ ಜಾರಿಗೆ ತರಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳಿಂದ ಬಡರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಮರ್ಶಿಸಿ, ಪರಿಹರಿಸಲು ವೈದ್ಯಕೀಯ ಮತ್ತು ಕಾನೂನು ಕ್ಷೇತ್ರದ ಪರಿಣಿತಿಯುಳ್ಳವರು ಸೇರಿದಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅಧ್ಯಕ್ಷತೆಯಲ್ಲಿ ಶಾಸನ ಬದ್ಧ ಸಮಿತಿ ರಚಿಸಲಾಗಿದೆ. 8 ವಾರಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ದರ ವಸೂಲಿಯಿಂದ ಆಗುವ ಶೋಷಣೆ ತಪ್ಪಿಸಬೇಕು. ಪ್ರತಿ ಚಿಕಿತ್ಸೆಗೂ ದರ ಪಟ್ಟಿ ಪ್ರದರ್ಶಿಸುವುದನ್ನು ಕಡ್ಡಾಯ ಗೊಳಿಸುವುದು. ವಿವಿಧ ವೈದ್ಯಕೀಯ ಚಿಕಿತ್ಸೆ, ತಪಾಸಣೆ, ವೈದ್ಯರ ಶುಲ್ಕ ಸೇರಿದಂತೆ ಎಲ್ಲವನ್ನು ರೋಗಿಗಳ ಗಮನಕ್ಕೆ ತರುವ ದೃಷ್ಟಿಯಿಂದ ಕಾನೂನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಆಕಾಶವೇ ಸೂಕ್ತ: ಖಾಸಗಿ ಆಸ್ಪತ್ರೆಗಳು ರಾಜ್ಯದ ಭೂಮಿ, ನೀರು, ವಿದ್ಯುತ್ ಸೇರಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಇಲ್ಲಿನ ಸಾರ್ವಜನಿಕರನ್ನು ಶೋಷಣೆ ಮಾಡುವುದು ಸಲ್ಲ. ಒಂದು ವೇಳೆ ಅವರು ಶೋಷಣೆ ಮಾಡಬೇಕಿದ್ದರೆ ಅವರು ತಮ್ಮ ಆಸ್ಪತ್ರೆಯನ್ನು ಆಕಾಶದಲ್ಲಿ ಇಟ್ಟುಕೊಳ್ಳುವುದು ಸೂಕ್ತ ಎಂದು ಅವರು ಎಚ್ಚರಿಸಿದರು. ಖಾಸಗಿ ಆಸ್ಪತ್ರೆಗಳು ಲಾಭ ಗಳಿಕೆ ಉದ್ದೇಶವನ್ನು ಬಿಟ್ಟು ಜನರಿಗೆ ಸೇವೆ ಒದಗಿಸಬೇಕು. ವೃತ್ತಿ ಸಂಹಿತೆ ಕಾಪಾಡಿಕೊಳ್ಳಬೇಕು. ವೃತ್ತಿ ಸಂಹಿತೆ ಉಲ್ಲಂಘಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ರಮೇಶ್ ಕುಮಾರ್ ತಿಳಿಸಿದರು.
ಜನ ಸಾಮಾನ್ಯರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಯಾವುದೇ ವೈದ್ಯಕೀಯ ಸಂಸ್ಥೆಯಾಗಿದ್ದರೂ, ‘ಮೊದಲು ಚಿಕಿತ್ಸೆ, ಆ ಬಳಿಕ ಹಣ’ ಎಂಬ ಸಂಕಲ್ಪ ಮಾಡಬೇಕು. ಆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲಾಗುವುದು ಎಂದು ಹೇಳಿದರು.