ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ: ರಾಮಸ್ವಾಮಿ ಶೆಟ್ಟಿಗದ್ದೆ

Update: 2016-10-28 16:33 GMT

ಚಿಕ್ಕಮಗಳೂರು, ಅ.28: ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಾದ್ಯಂತ ವಾಡಿಕೆ ಮಳೆಯಾಗದೆ ಅಂತರ್ಜಲ ಕುಸಿದಿದೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಅಧಿಕಾರಿಗಳಿಗೆ ತಿಳಿಸಿದರು. ಅವರು ನಗರದ ಜಿಪಂ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 ಪ್ರಸ್ತುತ ಸಾಲಿನಲ್ಲಿ ವಾಡಿಕೆ ಮಳೆಯು ಸರಿಯಾಗಿ ಆಗದ ಕಾರಣ ಬರದ ಛಾಯೆ ಆವರಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಜನ ಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಸೌಲಭ್ಯಗಳನ್ನು ಕಲ್ಪಿಸುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳ ಕೆಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಪೂರ್ಣಗೊಂಡಿದ್ದರೂ ಸಹ ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ ಎಂದ ಅವರು ಈ ನಿಟ್ಟಿನಲ್ಲಿ ಪೂರ್ಣಗೊಂಡಿರುವ ಘಟಕಗಳನ್ನು ಆದಷ್ಟು ಬೇಗ ಕಾರ್ಯಾರಂಭ ಗೊಳಿಸಬೇಕು ಎಂದರು.

ರಸಗೊಬ್ಬರದ ಮಾರಾಟಗಾರರು ಕಳಪೆ ಗುಣಮಟ್ಟದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಗೊಬ್ಬರ ಸರಬರಾಜು ಮಾಡಿದ ಏಜೆನ್ಸಿಗಳ ಮೇಲೆ ಕ್ರಮಕೈಗೊಳ್ಳಬೇಕು. ಪ್ರತಿಯೊಂದು ಮಾರಾಟ ಮಳಿಗೆಯಲ್ಲಿ ರಸಗೊಬ್ಬರದ ಬೆಲೆಯ ನಾಮಫಲಕಗಳನ್ನು ಅಂಗಡಿಗಳಲ್ಲಿ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಬಡರೈತರಿಗೆ ಸೌಲಭ್ಯ ಕಲ್ಪಿಸುತ್ತಿರುವ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಆದರೆ ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಗಳು ತುಂಬಾ ವಿಳಂಬವಾಗುತ್ತಿದ್ದು, ಅಧಿಕಾರಿಗಳು ಇಲಾಖೆಗಳ ಸಮನ್ವಯದೊಂದಿಗೆ ಕಾ ರ್ಯನಿರ್ವಹಿಸುವುದರೊಂದಿಗೆ ತುರ್ತಾಗಿ ವಿದ್ಯುತ್‌ಚ್ಛಕ್ತಿ ಸಂಪರ್ಕ ಕಲ್ಪಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳೆ ಬರುವಂತಹ ಮೇವಿನ ಬೀಜಗಳನ್ನು ರೈತರಿಗೆ ವಿತರಿಸಬೇಕು ಅನುದಾನದ ಕೊರತೆ ಇದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರು. ಜಿಪಂ ಸಿಇಒ ಡಾ. ಆರ್. ರಾಗಪ್ರಿಯಾ ಮಾತನಾಡಿ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಯೋಜನೆಯಡಿಯಲ್ಲಿ ನೀಡುತ್ತಿರುವ ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿವೆಯೇ ಹಾಗೂ ವಿತರಣೆ ಮಾಡುವಾಗ ಅದು ನಿಗದಿತ ಅಳತೆಯಲ್ಲಿದೆಯೇ ಎಂಬುದನ್ನು ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಗಳು ಆಗಿಂದ್ದಾಗೆ ಪರಿಶೀಲನೆ ಮಾಡುವುದರೊಂದಿಗೆ ಆ ವರದಿಯನ್ನು ತಮ್ಮ ಕಚೇರಿಗೆ ತಲುಪಿಸಬೇಕೆಂದರು.

ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ರವೀಂದ್ರ ಬೆಳವಾಡಿ ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಯು.ಕೆ. ಶಾಮಣ್ಣ, ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಲಿಂಗರಾಜು ಮಾತನಾಡಿದರು. ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಎಚ್.ವಿ ನಾಗರಾಜ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News