ಕೊಡಗಿಗೆ 4ನೆ ಹಣಕಾಸು ಆಯೋಗದ ಅಧ್ಯಕ್ಷ ಚಿನ್ನಸ್ವಾಮಿ ಭೇಟಿ

Update: 2016-10-28 16:34 GMT

ಮಡಿಕೇರಿ, ಅ.28: ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ, ರಸ್ತೆ ಸುಧಾರಣೆ, ಕಾಡಾನೆ ಹಾವಳಿ ನಿಯಂತ್ರಣ, ಬುಡಕಟ್ಟು ಜನರು ಹಾಗೂ ಸ್ಲಂ ಕಾಲನಿಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸುವಂತೆ ರಾಜ್ಯದ 4ನೆ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಅವರಲ್ಲಿ ಸ್ಥಳೀಯ ಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಜಿಪಂ, ತಾಪಂ, ನಗರಸಭೆ ಹಾಗೂ ಪಪಂಗಳಿಗೆ ಶುಕ್ರವಾರ ರಾಜ್ಯ 4ನೆ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದರು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಪಂ, ತಾಪಂ, ಗ್ರಾಪಂ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಾತನಾಡಿದ ರಾಜ್ಯ 4ನೆ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಗ್ರಾಮೀಣ ಭಾಗದ ಜನರು ನಗರ ಪ್ರದೇಶದತ್ತ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಜನಜೀವನವನ್ನು ಸರಿದೂಗಿಸುವ ನಿಟ್ಟಿನಲ್ಲಿ ನಗರದಲ್ಲಿರುವ ಮೂಲ ಸೌಲಭ್ಯಗಳನ್ನು ಗ್ರಾಮೀಣ ಜನತೆಗೆ ಕಲ್ಪಿಸಲು ಪ್ರಯತ್ನಿಸಬೇಕಿದೆ ಎಂದರು. ಸರಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸದಸ್ಯರು ಹಂಚಿಕೆ ಮಾಡಿಕೊಳ್ಳುತ್ತಾರೆ. ಇದರಿಂದ ಕಾಮಗಾರಿಗಳು ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ಆದ್ಯತೆ ಮೇಲೆ ಕಾಮಗಾರಿಗಳಿಗೆ ಒತ್ತು ನೀಡಬೇಕಿದೆ. ಇದರಿಂದ ಸುಧಾರಣೆ ತರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಸದ್ಯ 2012ರಿಂದ 2015ರೊಳಗೆ ಪಂಚಾಯತ್‌ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಶೇ.32ರಷ್ಟು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮತ್ತು ಶೇ.10ರಷ್ಟು ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಬಿಡುಗಡೆ ಮಾಡಲು ಶಿಫಾರಸು ಮಾಡಲಾಗಿತ್ತು. ಮೂಲ ಸೌಲಭ್ಯ ಸೇರಿದಂತೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ದೀಪ ಅಳವಡಿಕೆ, ತೆರಿಗೆ ಸಂಗ್ರಹ ಯಾವ ರೀತಿ ಆಗುತ್ತಿದೆ ಎಂಬ ವಿವಿಧ ಪ್ರಶ್ನಾವಳಿಯ ಮಾಹಿತಿಯನ್ನು ಒಂದು ತಿಂಗಳೊಳಗೆ ಒದಗಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ 4ನೆ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಇದೇ ಸಂದಭರ್ದಲ್ಲಿ ನಿರ್ದೇಶನ ನೀಡಿದರು. ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಜಿಪಂಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಇದನ್ನು 5 ಕೋಟಿ ರೂ.ಗೆ ಹೆಚ್ಚಿಸಬೇಕು. ಜಿಪಂನ ಹಲವು ಕಾರ್ಯಕ್ರಮಗಳಿಗೆ ಕಾಲಮಿತಿಯೊಳಗೆ ಅನುದಾನ ಬಿಡುಗಡೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಬಯಲು ಪ್ರದೇಶದಲ್ಲಿ ಗುಡಿ ಕೈಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವಂತಾಗಬೇಕು ಎಂದು ಮನವಿ ಮಾಡಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜು ಸುಬ್ರಮಣಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಪಿ.ಸುಬ್ರಮಣಿ, ಸದಸ್ಯರಾದ ಕರುಂಬಮ್ಮಯ್ಯ, ಪಂಕಜ, ಶಿವುಮಾದಪ್ಪ, ಸದಸ್ಯರಾದ ಸಿ.ಕೆ.ಬೋಪಣ್ಣ, ಸೋಮವಾರಪೇಟೆ ತಾಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಸೋಮವಾರಪೇಟೆ ತಾಪಂ ಸದಸ್ಯ ಅಭಿಮನ್ಯು ಕುಮಾರ್, ಸಂಪಾಜೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಕಳಗಿ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಸರೋಜಮ್ಮ, ಅಪ್ಪಚಂಡ ಮಹೇಶ್, ಪೂರ್ಣಿಮಾ ಗೋಪಾಲ್, ಕವಿತಾ ಪ್ರಭಾಕರ್, ಕುಮುದಾ ಧರ್ಮಪ್ಪ, ವೀರಾಜಪೇಟೆ ತಾಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿಪಂ ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ ಮತ್ತಿತರರು ಮಾತನಾಡಿದರು. ಆಯೋಗದ ಸದಸ್ಯರಾದ ಡಾ. ಎಚ್.ಶಶಿಧರ, ಸಮಾಲೋಚಕರಾದ ಚಂದ್ರಶೇಖರ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News