ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ: ಡಾ. ಎಸ್.ಕಲ್ಲಪ್ಪ
ಸಾಗರ, ಅ.28: ಜಾನುವಾರು ಗಳಿಗೆ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ವನ್ನು ತಾಲೂಕಿನಾದ್ಯಂತ ಸಮರೋಪಾದಿಯಲ್ಲಿ ನಡೆಸ ಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ಕಲ್ಲಪ್ಪ ಹೇಳಿದರು. ತಾಲೂಕಿನ ಆವಿನಹಳ್ಳಿಯಲ್ಲಿ ರವೀಂದ್ರ ಕಾಮತ್ ಅವರ ವಿಠ್ಠಲ್ ಡೈರಿಯಲ್ಲಿ ಗುರುವಾರ ಪಶು ಪಾಲನಾ ಇಲಾಖೆಯಿಂದ ಹಮ್ಮಿಕೊಳ್ಳ ಲಾಗಿದ್ದ 11ನೆ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ಈ ಕಾರ್ಯಕ್ರಮವು ನ.23ರವರೆಗೆ ನಿರಂತರವಾಗಿ ತಾಲೂಕಿನ ಎಲ್ಲ ಜಿಪಂ ವ್ಯಾಪ್ತಿಯಲ್ಲಿ ನಡೆಸಲಾಗುತ್ತದೆ. ತಾಲೂಕಿನ 1.21 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದ್ದು, 9 ತಂಡಗಳನ್ನು ರಚಿಸಲಾಗಿದೆ ಎಂದರು. ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡಿಕೊಂಡರೆ ಆರ್ಥಿಕವಾಗಿ ಲಾಭ ಪಡೆಯಲು ಸಾಧ್ಯವಿದೆ. ಜಾನುವಾರುಗಳು ರೋಗರುಜಿನಗಳಿಗೆ ತುತ್ತಾಗಬಾರದು ಎನ್ನುವ ಉದ್ದೇಶದಿಂದ ಸರಕಾರ ಲಸಿಕೆಯನ್ನು ಹಾಕುತ್ತಿದೆ. ರೈತರು ಮೂಢನಂಬಿಕೆಗಳಿಗೆ ಕಿವಿಗೊಡದೆ ತಮ್ಮ ಜಾನುವಾರುಗಳಿಗೆ ಸೂಕ್ತಕಾಲಕ್ಕೆ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಪಂ ಸದಸ್ಯ ಎನ್.ಚಂದ್ರಶೇಖರ್, ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಮೇವಿನ ಬರ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದರೆ ಜೀವಹಾನಿಯಾಗುವ ಸಾಧ್ಯತೆ ಇರುತ್ತದೆ. ರೈತರು ಪಶುಪಾಲನಾ ಇಲಾಖೆಯಿಂದ ನೀಡುತ್ತಿರುವ ಲಸಿಕೆಯನ್ನು ಜಾನುವಾರುಗಳಿಗೆ ಕೊಡಿಸಬೇಕು ಎಂದರು. ಪಶುವೈದ್ಯಾಧಿಕಾರಿ ಡಾ. ಎನ್.ಪಿ.ಮಂಜುನಾಥ್ ಹಾಗೂ ರವೀಂದ್ರ ಕಾಮತ್, ರವೀಂದ್ರ ಆವಿನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.