ಪ್ರಾಮಾಣಿಕತೆ-ನಿಷ್ಠೆ ಬ್ಯಾರಿ ಸಮಾಜದ ಹೆಗ್ಗಳಿಕೆ: ಎಚ್.ಡಿ.ದೇವೇಗೌಡ
ಬೆಂಗಳೂರು, ಅ.29: ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಬ್ಯಾರಿ ಮುಸ್ಲಿಮ್ ಸಮಾಜವು ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಪ್ರಸಿದ್ಧಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇ ಷನ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ವರ್ಷದ ಬ್ಯಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗ್ಗೊಂಡು ಅವರು ಮಾತನಾಡಿದರು.
ಬ್ಯಾರಿ ಮುಸ್ಲಿಮರು ಶಿಕ್ಷಣ, ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದು ದೇವೇಗೌಡ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ ಗ್ರಾಮದಲ್ಲಿ ಫೌಝಿಯಾ ಹಾಗೂ ಸಮೀರಾ ಎಂಬ ಹೆಣ್ಣುಮಕ್ಕಳು ಪದವಿ ಕಾಲೇಜು ಪ್ರಾರಂಭ ಮಾಡಿರುವ ಸಾಧನೆಯು ಅಪ್ರತಿಮವಾದದ್ದು. ನನ್ನ ಸಂಸದರ ನಿಧಿಯಿಂದ ಈ ಹೆಣ್ಣುಮಕ್ಕಳು ಸ್ಥಾಪನೆ ಮಾಡಿರುವ ಕಾಲೇಜಿಗೆ ನೆರವು ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದರು.
“ಬಹುಸಂಸ್ಕೃತಿಗಳನ್ನು ಒಳಗೊಂಡಿರುವ ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಯಾವುದೆ ಕಾರಣಕ್ಕೂ ತಾನು ಇದಕ್ಕೆ ಅವಕಾಶ ನೀಡುವುದಿಲ್ಲ. ಈಗಾಗಲೆ ನನ್ನ ನಿಲುವನ್ನು ನಾನು ಸ್ಪಷ್ಪಡಿಸಿದ್ದೇನೆ ಎಂದು ದೇವೇಗೌಡ ಹೇಳಿದರು.
ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಕ್, ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಕಾರಣಾಂತರಗಳಿಂದ ಅವರು ಪರಾಭವಗೊಂಡರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಸೋಲಿನ ನಂತರವು ನಿಷ್ಠೆಯನ್ನು ಕಾಯ್ದುಕೊಳ್ಳುವುದು ಉತ್ತಮವಾದ ಗುಣ ಎಂದು ಅವರು ಹೇಳಿದರು.
ನಿಷ್ಠೆ ಹಾಗೂ ಪ್ರಾಮಾಣಿಕತೆ ಬ್ಯಾರಿ ಸಮಾಜದ ಪ್ರತಿಯೊಬ್ಬರಲ್ಲೂ ಇದೇ ಎನ್ನುವುದಕ್ಕೆ ಫಾರೂಕ್ ಉದಾಹರಣೆ. ಮುಂದಿನ ಚುನಾವಣೆಯವರೆಗೆ ನಾನು ಜೀವಂತವಾಗಿದ್ದರೆ ಈಗ ಸಚಿವ ಯು.ಟಿ.ಖಾದರ್ ಕೂತಿರುವ ಸ್ಥಾನದಲ್ಲಿ ಅವರನ್ನು ಕೂರಿಸುತ್ತೇನೆ ಎಂದು ದೇವೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ, ಜೆಡಿಎಸ್ ಮುಖಂಡ ಶಫೀವುಲ್ಲಾ ಸೇರಿದಂತೆ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ ಗ್ರಾಮದಲ್ಲಿ ಪದವಿ ಕಾಲೇಜು ಪ್ರಾರಂಭಿಸಿರುವ ಫೌಝಿಯಾ ಹಾಗೂ ಸಮೀರಾರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದೀನ್‌ರಿಗೆ ‘ವರ್ಷದ ಬ್ಯಾರಿ ಪುರಸ್ಕಾರ’ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಪ್ರದಾನ ಮಾಡಲಾಯಿತು.