ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕ ನಿರ್ಮಾಣಕ್ಕೆ ಸಹಕಾರ: ಸಚಿವ ಎಂ.ಕೃಷ್ಣಪ್ಪಭರವಸೆ

Update: 2016-10-31 16:11 GMT

ಮಡಿಕೇರಿ,ಅ.31 : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರಂತಹ ಸ್ವಾತಂತ್ರ್ಯ ಸೇನಾನಿಯನ್ನು ಸದಾ ಸ್ಮರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ವಸತಿ ಸಚಿವರಾದ ಎಂ.ಕೃಷ್ಣಪ್ಪ ಭರವಸೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣ ದಿನಾಚರಣೆ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ಸೋಮವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಸಿಪಾಯಿ ದಂಗೆಗೂ ಮೊದಲೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಸಮರ ಸಾರಿದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಗುಡ್ಡೆಮನೆ ಅಪ್ಪಯ್ಯಗೌಡರ ಸ್ವಾತಂತ್ರ್ಯ ಹೋರಾಟ ಸ್ಮರಣೀಯ, ಇಂತಹ ಮಹಾನ್ ಸ್ವಾತಂತ್ರ್ಯ ಹೋರಟಗಾರರನ್ನು ಸದಾ ನೆನಪಿಸುವ ಅಗತ್ಯವಿದ್ದು, ಸ್ಮಾರಕ ನಿರ್ಮಾಣವಾಗಬೇಕೆಂದು ಅಭಿಪ್ರಾಯಪಟ್ಟರು.

 ದೇಶಕ್ಕಾಗಿ, ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಬೇಕಿದೆ ಎಂದರು. ಶಾಸಕರಾದ ಕೆ.ಜಿ.ಬೋಪ್ಪಯ್ಯ ಅವರು ಮಾತನಾಡಿ, ಬ್ರಿಟಿಷರಿಂದ ನಾಡಿಗೆ ಸಂಕಷ್ಟ ಬಂದಾಗ ಗುಡ್ಡೆಮನೆ ಅಪ್ಪಯ್ಯಗೌಡರು ಕೆಚ್ಚೆದೆಯಿಂದ ಹೋರಾಡಿದರು. ಇಂತಹ ಮಹಾನ್ ಹೋರಾಟಗಾರರ ತ್ಯಾಗ ಬಲಿದಾನಗಳು ಶ್ಲಾಘನೀಯವೆಂದರು. ಅಪ್ಪಯ್ಯಗೌಡರ ದೇಶಪ್ರೇಮದ ಬಗೆಗಿನ ಪಾಠ ಇವತ್ತಿನ ಯುವ ಜನತೆಗೆ ಸಿಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೊಡಗು, ಸುಳ್ಯ, ಪುತ್ತೂರು ಬೆಳ್ತಂಗಡಿ ಮತ್ತಿತರ ಭಾಗಗಳಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಪ್ರಾಂತ್ಯಗಳ ಜನರ ರಕ್ಷಣೆಗಾಗಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಹೋರಾಟ ಮಾಡಿದರು ಎಂದು ಕೆ.ಜಿ.ಬೋಪಯ್ಯ ಸ್ಮರಿಸಿದರು. ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿದರು. ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು, ರೇವತಿ ರಮೇಶ್ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು, ಕುಡೆಕಲ್ ಸಂತೋಷ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News