ಟಿಪ್ಪು ಸುಲ್ತಾನ್ ಬಗ್ಗೆ ವಿಸ್ತೃತ ಚರ್ಚೆಯಾಗಲಿ: ವಿಶ್ವನಾಥ್

Update: 2016-10-31 17:19 GMT

ಮಡಿಕೇರಿ ಅ.31 : ಟಿಪ್ಪುಸುಲ್ತಾನ್ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಸತ್ಯಾಂಶವನ್ನು ಅರಿಯಲು ವಿಸ್ತೃತ  ಚರ್ಚೆ ನಡೆಸುವ ಅಗತ್ಯವಿದೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟಿಪ್ಪು ಜಯಂತಿ ಸರಕಾರದ ಕಾರ್ಯಕ್ರಮವಾಗಿದ್ದು, ಇದನ್ನು ಜಿಲ್ಲಾಡಳಿತ ಮಾಡಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛೆ ಇಲ್ಲದವರು ಪಾಲ್ಗೊಳ್ಳದೆ ಸುಮ್ಮನಿದ್ದರೆ ಆಯಿತು ಎಂದು ಹೇಳಿದರು. ದೇಶದ ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲ ಆಚರಣೆಗಳಿಗೂ ಅವಕಾಶವಿದೆ. ಜನರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಿ ಪ್ರಚೋದಿಸುವುದು ಸರಿಯಾದ ಕ್ರಮವಲ್ಲವೆಂದರು. ಯಾವುದೇ ಜಾತಿ, ಮತ, ಧರ್ಮದ ಆಧಾರದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿಲ್ಲ. ಇದೊಂದು ಸರಕಾರಿ ಆಯೋಜಿತ ಕಾರ್ಯಕ್ರಮವಾಗಿದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಕೊಡವರ ಮಾರಣ ಹೋಮವಾಗಿದೆ, ಮತಾಂತರವಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 250 ವರ್ಷಗಳ ಹಿಂದೆ ಕೊಡಗಿನಲ್ಲಿ ಜನಸಂಖ್ಯೆ ಎಷ್ಟಿತ್ತು ಮತ್ತು ಈ ಸಂಖ್ಯೆಯಲ್ಲಿ ಕೊಡವರ ಸಂಖ್ಯೆ ಎಷ್ಟು ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಈ ಘಟನಾವಳಿಗಳಿಗೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದ ಅವರು, ಇದೇ ಕಾರಣಕ್ಕೆ ವಿಸ್ತ್ತೃತ ಚರ್ಚೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಟಿಪ್ಪುವನ್ನು ವಿರೋಧಿಸುತ್ತಿರುವವರೆ ಚರ್ಚೆಗೆ ಬೇಕಾದ ವೇದಿಕೆಯನ್ನು ಸೃಷ್ಟಿಸಲಿ ಎಂದು ತಿಳಿಸಿದ ವಿಶ್ವನಾಥ್ ಚರ್ಚೆಯಲ್ಲಿ ಚರಿತ್ರಾಕಾರರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬೇಕೆಂದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯವನ್ನು ತಿಳಿಸಲು ಮತ್ತು ಚರ್ಚೆಯನ್ನು ನಡೆಸಲು ಅವಕಾಶವಿದೆ. ಈ ಮೂಲಕ ಸತ್ಯಾಂಶವನ್ನು ಅರಿಯಬೇಕೆ ಹೊರತು ಚರಿತ್ರೆಯನ್ನು ಪೂರ್ತಿಯಾಗಿ ಅಧ್ಯಯನ ಮಾಡಿದಂತೆ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿ ಮಾಡಬಾರದು ಎಂದರು. ಚರಿತ್ರೆಯನ್ನು ತಿರುಚುತ್ತಿರುವವರಿಂದ ಹಾಗೂ ಟಿಪ್ಪುಜಯಂತಿ ಆಚರಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಧಕ್ಕೆ ಇಲ್ಲವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

nಬಿಜೆಪಿ ಸೇರುತ್ತಿರುವುದು ನೋವು ತಂದಿದೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು, ತಮ್ಮ ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೇರುತ್ತಿರುವುದು ತಮಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಮನವಿ ಮಾಡಿಕೊಂಡರೂ ಅವರು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಸಾಮಾಜಿಕ ಕಾರ್ಯಕರ್ತ ಹಿರೇಮಠ್ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮಾಡಿರುವ ಭೂಕಬಳಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಎಲ್ಲ್ಲ ರಾಜಕೀಯ ಪಕ್ಷಗಳ ಬಗ್ಗೆ ಜನರು ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದರು. ಯಾರಿಗೇನು ಕಡಿಮೆ ಎನ್ನುವಂತೆ ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಬಗ್ಗೆ ಜನರಿಗೆ ನಂಬಿಕೆಯಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ಜನತಂತ್ರ ವ್ಯವಸ್ಥೆಯಲ್ಲಿ ಇದೊಂದು ನಿರಾಶಾದಾಯಕ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News