ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಲ್ಲದೆ ಬರಿದಾದ ನೂರಾರು ಕೆರೆಗಳು

Update: 2016-10-31 16:18 GMT

 ಬಿ. ರೇಣುಕೇಶ್

ಶಿವಮೊಗ್ಗ, ಅ. 31: ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಮಲೆನಾಡಿನಲ್ಲಿ ಬರದ ಕಾರ್ಮೋಡ ಆವರಿಸಿದ್ದು, ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯ ನೂರಾರು ಕೆರೆಗಳು ಹನಿ ನೀರಿಲ್ಲದೆ ಬರಿದಾಗಿವೆ. ಪ್ರಸ್ತುತ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆಗಳು ಬರಿದಾಗುವ ಹಂತದಲ್ಲಿವೆ.

  ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಜಿಪಂ ಆಡಳಿತದ ಉಸ್ತುವಾರಿಯಲ್ಲಿ ಸರಿಸುಮಾರು 2,500 ಕ್ಕೂ ಅಧಿಕ ಕೆರೆಗಳಿವೆ. ಆದರೆ ಇದರಲ್ಲಿ ಯಾವೊಂದು ಕೆರೆಯು ಶೇ. 100 ರಷ್ಟು ಭರ್ತಿಯೇ ಆಗಿಲ. ಇನ್ನಷ್ಟೆ ಭರ್ತಿಯಾಗಬೇಕಾಗಿದೆ ಎಂದು ಜಿಪಂ. ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ. ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್‌ರವರು, ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಜಿಪಂ. ವ್ಯಾಪ್ತಿಯ ಯಾವೊಂದು ಕೆರೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಡಿ ಬರುವ ಕೆರೆಗಳ ಬಗ್ಗೆ ತಮಗೆ ಮಾಹಿತಿಯಿಲ್ಲವಾಗಿದೆ ಎಂದು ತಿಳಿಸಿರು.

ಅಕ್ಟೋಬರ್ ತಿಂಗಳ 14 ರ ದಿನದವರೆಗಿನ ಮಾಹಿತಿಯ ಪ್ರಕಾರ, ಈಗಾಗಲೇ ಜಿಪಂ. ವ್ಯಾಪ್ತಿಯ ಹಲವು ಕೆರೆಗಳು ನೀರಿಲ್ಲದೆ ಬರಿದಾಗಿವೆ. ಮತ್ತೆ ಕೆಲ ಕೆರೆಗಳಲ್ಲಿ ಶೇ.30ರಷ್ಟು ಹಾಗೂ ಶೇ.50ರಷ್ಟು ನೀರು ಸಂಗ್ರಹವಾಗಿದೆ. ಹಿಂಗಾರು ಮಳೆ ಉತ್ತಮವಾಗಿ ಬಿದ್ದರೆ ಕೆರೆಗಳಲ್ಲಿ ನೀರು ಸಂಗ್ರಹಣೆಗೆ ಸಹಾಕಾರಿಯಾಗಲಿದೆ. ಇಲ್ಲದಿದ್ದರೆ ಕೆರೆಗಳಲ್ಲಿ ನೀರಿನ ಕೊರತೆಯಿಂದ ಬೇಸಿಗೆಯಲ್ಲಿ ಸಾಕಷ್ಟು ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ ಎಂದು ಎಸ್.ಎಂ.ಹರೀಶ್‌ರವರು ಹೇಳಿದ್ದಾರೆ. ವಿವರ:

ಜಿಪಂ. ವ್ಯಾಪ್ತಿಯ ಕೆರೆಗಳಲ್ಲಿನ ತಾಲೂಕುವಾರು ವಿವರ ಈ ಮುಂದಿನಂತಿದೆ. ಶಿವಮೊಗ್ಗ ತಾಲೂಕಿನಲ್ಲಿ ಜಿಪಂ. ವ್ಯಾಪ್ತಿಯಲ್ಲಿ ಒಟ್ಟಾರೆ 551 ಕೆರೆಗಳಿದ್ದು, ಇದರಲ್ಲಿ 332 ಕೆರಗಳು ನೀರಿಲ್ಲದೆ ಬರಿದಾಗಿವೆ. ಉಳಿದಂತೆ 137 ಕೆರೆಗಳಲ್ಲಿ ಶೇ.30ರಷ್ಟು ಹಾಗೂ 82 ರಲ್ಲಿ ಶೇ.31ರಿಂದ 50 ರಷ್ಟು ನೀರು ಸಂಗ್ರಹವಾಗಿದೆ. ಭದ್ರಾವತಿ ತಾಲೂಕಿನಲ್ಲಿರುವ 44 ಕೆರೆಗಳಲ್ಲಿ 25 ಖಾಲಿಯಾಗಿದ್ದು, 12 ರಲ್ಲಿ ಶೇ. 30 ರಷ್ಟು ಹಾಗೂ 70 ಕೆರೆಗಳಲ್ಲಿ ಶೇ. 31 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ. ತೀರ್ಥಹಳ್ಳಿಯ 686 ಕೆರೆಗಳಲ್ಲಿ 378 ನೀರಿಲ್ಲದೆ ಬರಿದಾಗಿದ್ದು, 171 ರಲ್ಲಿ ಶೇ. 30 ರಷ್ಟು ಹಾಗೂ 137 ರಲ್ಲಿ ಶೇ. 31 ರಿಂದ 50 ರಷ್ಟು ನೀರಿದೆ.

ಸಾಗರದ 613 ಕೆರೆಗಳಲ್ಲಿ 252 ಖಾಲಿಯಾಗಿದ್ದು, 182 ರಲ್ಲಿ ಶೇ. 30 ರಷ್ಟು ಹಾಗೂ 179 ಕೆರೆಗಳಲ್ಲಿ ಶೇ. 50 ರಷ್ಟು ನೀರು ಸಂಗ್ರಹವಾಗಿದೆ. ಶಿಕಾರಿಪುರದ 931 ಕೆರೆಗಳಲ್ಲಿ 408 ಖಾಲಿಯಾಗಿದ್ದು, 313 ರಲ್ಲಿ ಶೇ. 30 ರಷ್ಟು ಹಾಗೂ 210 ಕೆರೆಗಳಲ್ಲಿ ಶೇ. 31 ರಿಂದ 50 ರಷ್ಟು ನೀರಿದೆ. ಸೊರಬದ 1,059 ಕೆರೆಗಳಲ್ಲಿ 740 ರಲ್ಲಿ ನೀರಿಲ್ಲದೆ ಬರಿದಾಗಿದ್ದು, 209 ರಲ್ಲಿ ಶೇ. 30 ರಷ್ಟು ಹಾಗೂ 110 ರಲ್ಲಿ ಶೇ. 31 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ. ಉಳಿದಂತೆ ಹೊಸನಗರ ತಾಲೂಕಿನಲ್ಲಿ ಒಟ್ಟಾರೆ ಜಿಪಂ. ಅಧೀನದಲ್ಲಿ 958 ಕೆರೆಗಳಿವೆ. ಇದರಲ್ಲಿ ಸಂಕಷ್ಟ ನಿಶ್ಚಿತ: ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯಿಂದ ಹಾಗೂ ಹೆಚ್ಚುತ್ತಿರುವ ತಾಪಮಾನದ ಪ್ರಮಾಣದಿಂದ ಈಗಾಗಲೇ ಹಲವು ಗ್ರಾಮಗಳಲ್ಲಿ ಬೋರ್‌ವೆಲ್-ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರ್‌ವೆಲ್‌ಗಳು ನೀರಿಲ್ಲದೆ ಬರಿದಾಗಿದ್ದು, ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದೆ. ಚಳಿಗಾಲದ ಪ್ರಾರಂಭದ ತಿಂಗಳಿನಲ್ಲಿಯೇ ಜಿಲ್ಲೆಯ ಹಲವೆಡೆ ಪರಿಸ್ಥಿತಿ ಹೇಳತೀರದಾಗಿದೆ. ಒಂದು ವೇಳೆ ಹಿಂಗಾರು ಮಳೆ ಚೆನ್ನಾಗಿ ಬಿದ್ದರೆ ಪರಿಸ್ಥಿತಿ ಸುಧಾರಿಸಲಿದೆ. ಇಲ್ಲದಿದ್ದರೆ ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಜಾನುವಾರಿಗೆ ಮೇವಿನ ಕೊರತೆಯ ಸಂಕಷ್ಟ ತೀವ್ರಗತಿಯಲ್ಲಿ ತಲೆದೋರುವುದು ನಿಶ್ಚಿತವಾಗಿದೆ ಎಂದು ಜಿಪಂ.ನ ಅಧಿಕಾರಿಯೋರ್ವರು ಹೇಳುತ್ತಾರೆ. ಜಿಪಂ ವ್ಯಾಪ್ತಿಯಲ್ಲಿ ನೀರಿಲ್ಲದೆ ಖಾಲಿಯಾಗಿರುವ ಕೆರೆಗಳ ವಿವರ

  ತಾಲೂಕು - ಒಟ್ಟು ಕೆರೆಗಳು - ಖಾಲಿಯಾಗಿರುವುವು

                  ಶಿವಮೊಗ್ಗ - 551 - 332

                     ಭದ್ರಾವತಿ - 44 - 25

                      ಸಾಗರ - 613 - 252

                 ಸೊರಬ - 1,059 - 209

                 ತೀರ್ಥಹಳ್ಳಿ - 686 - 378

                ಶಿಕಾರಿಪುರ - 931 - 408

                 ಹೊಸನಗರ - 958 - 351

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News