ರಾಷ್ಟ್ರದ ಅಖಂಡತೆಗೆ ಒಗ್ಗಟ್ಟನ್ನು ಪ್ರದರ್ಶಿಸಿ: ಸಚಿವ ಎಂ.ಕೃಷ್ಣಪ್ಪ
ಮಡಿಕೇರಿ, ಅ.31: ಜಾತಿ, ಮತ, ಭೇದಗಳನ್ನು ಮರೆತು ನಾವೆಲ್ಲರು ಭಾರತೀಯರು ಎನ್ನುವ ಮನೋಭಾವನೆಯೊಂದಿಗೆ ರಾಷ್ಟ್ರದ ಅಖಂಡತೆಗೆ ಪ್ರತಿಯೊಬ್ಬರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ರಾಜ್ಯ ವಸತಿ ಸಚಿವ ಎಂ.ಕೃಷ್ಣಪ್ಪಕರೆ ನೀಡಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕೆಳಗಿನ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ತಿಥಿಯ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಮತ್ತು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಮನುಷ್ಯ ಮನುಷ್ಯರ ನಡುವೆ ಭೇದವನ್ನು ಉಂಟು ಮಾಡದೆ, ನಾವೆಲ್ಲರು ಭಾರತೀಯರು ಎನ್ನುವ ಮನೋಭಾವನೆಯನ್ನು ಹುಟ್ಟು ಹಾಕಿದ ಪಕ್ಷ ಕಾಂಗ್ರೆಸ್ ಎಂದು ಬಣ್ಣಿಸಿ, ಭಾವೈಕ್ಯತೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಎಲ್ಲರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಕೊಡಗು ಜಿಲ್ಲೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದ ಸಚಿವ ಕೃಷ್ಣಪ್ಪ, ಕಾವೇರಮ್ಮ ಮತ್ತು ಇಗ್ಗುತ್ತಪ್ಪನ ಆಶೀರ್ವಾದದಿಂದ ಬೆಂಗಳೂರು ಬೆಳೆಯಲು ಕಾರಣವಾಗಿದೆಯೆಂದು ಅಭಿಪ್ರಾಯಪಟ್ಟರು. ಕಾವೇರಿ ನದಿ ಇಲ್ಲದಿದ್ದರೆ ಬೆಂಗಳೂರು ಇಂದು ಇರುತ್ತಿರಲಿಲ್ಲವೆಂದರು.
ಮಾಜಿ ಸಂಸದ ಎಚ್. ವಿಶ್ವನಾಥ್ ಮಾತನಾಡಿ, ವಿಶ್ವದೆಲ್ಲೆಡೆ ದಿ.ಇಂದಿರಾ ಗಾಂಧಿಯವರ ಹೆಸರು ಚಿರಸ್ಥಾಯಿಯಾಗಿದೆ. ಭಾರತಕ್ಕೆ ಮೌಲ್ಯಾಧಾರಿತ ಶಕ್ತಿ ಸೈನಿಕರಿಂದ ಬಂದಿದೆಯೆಂದು ಅಭಿಪ್ರಾಯಪಟ್ಟ ಅವರು, ಬ್ಯಾಂಕ್, ಕೈಗಾರಿಕೆ, ತೈಲೋತ್ಪನ್ನ ಇನ್ನಿತರ ಕ್ಷೇತ್ರಗಳು ಇಂದಿರಾ ಗಾಂಧಿಯವರ ದಿಟ್ಟತನದಿಂದ ರಾಷ್ಟ್ರೀಕರಣಗೊಂಡಿದೆ. ಇದರ ಫಲವಾಗಿ ದುಡಿಯುವ ವರ್ಗ ಇಂದು ಸುಖದ ಜೀವನ ನಡೆಸುತ್ತಿದೆಯೆಂದು ತಿಳಿಸಿದರು. ಚಾಮರಾಜನಗರದ ಶಾಸಕ ವಾಸು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಹುಸೇನ್ ಮಾತನಾಡಿ, ಭಾರತೀಯ ಸೇನೆ ಇತ್ತೀಚೆಗೆ ನಡೆಸಿದ ಸರ್ಜಿಕಲ್ ದಾಳಿಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೆಂದು ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ನ ಪ್ರಭಾರ ಅಧ್ಯಕ್ಷ ಟಿ.ಪಿ. ರಮೇಶ್, ಸದೃಢ ಕಾರ್ಯಕರ್ತರ ಪಡೆ ರಚನೆ ಹಾಗೂ ಪಕ್ಷದ ಬಲವರ್ಧನೆ ಮುಂದಿನ ಗುರಿಯಾಗಿದೆಯೆಂದರು. ಅವರು ಇದೇ ಸಂದರ್ಭ ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಮಾಜಿ ಸಚಿವೆ ಸುಮಾ ವಸಂತ್, ಮಾಜಿ ಶಾಸಕ ಕೆ.ಎಂ. ಇಬ್ರಾಹೀಂ, ಪ್ರಮುಖರಾದ ಚಂದ್ರಮೌಳಿ ಮತ್ತಿತರರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ಕೆಪಿಸಿಸಿ ಪ್ರಮುಖ ಮಿಟ್ಟು ಚಂಗಪ್ಪ, ಪದ್ಮಿನಿ ಪೊನ್ನಪ್ಪ, ಜೆ.ಎ. ಕರುಂಬಯ್ಯ, ಬಿ.ಟಿ. ಪ್ರದೀಪ್, ಕೆ.ಎಂ. ಲೋಕೇಶ್, ಕಾವೆೇರಮ್ಮ ಸೋಮಣ್ಣ, ವಿ.ಪಿ. ಶಶಿಧರ್, ವಿ.ಪಿ. ಸುರೇಶ್, ಕುಮುದಾ ಧರ್ಮಪ್ಪ, ಮೈನಾ, ಎಸ್.ಎಂ. ಚಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ಬಾಂಗ್ಲಾದೇಶ ರಚನೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದಲ್ಲದೆ, ಪಾಕಿಸ್ತಾನದ ಹುಟ್ಟಡಗಿಸಿದ ಇಂದಿರಾ ಗಾಂಧಿ ಅವರ ಆಡಳಿತವಿರುವ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ ಅವರು ದುರ್ಗಾಮಾತೆ ಎಂದು ಬಣ್ಣಿಸಿದ್ದಾರೆ.