ಪೊಲೀಸ್ ಠಾಣೆಗಳು ಸಾರ್ವಜನಿಕರ ನೋವಿಗೆ ಸ್ಪಂದಿಸಿ ಜನಸ್ನೇಹಿಯಾಗಬೇಕು: ಶಾಸಕ ಅಪ್ಪಚ್ಚು
ಕುಶಾಲನಗರ, ಅ.31: ಪಟ್ಟಣದ ಬೈಚನಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯನ್ನು ಕೂಡುಮಂಗಳೂರು ವ್ಯಾಪ್ತಿಯ ರೇಷ್ಮೆ ಇಲಾಖೆ ಕಟ್ಟಡವನ್ನು ಬಾಡಿಗೆಗೆ ಪಡೆದು ಸ್ಥಳಾಂತರಿಸಲಾಯಿತು. ಸ್ಥಳಾಂತರವಾದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ನಂತರ ಮಾತನಾಡಿ, ಹೊರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿ ಒಳಗೊಂಡಿದೆ. ಅದರೆ ಪೊಲೀಸ್ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದರು.
ಸರಕಾರದ ಹಾಗೂ ಇಲಾಖೆಯ ಯಾವುದೇ ಧನ ಸಹಾಯವಿಲ್ಲದೆ ನೂತನವಾಗಿ ವಿನ್ಯಾಸಗೊಂಡಿರುವ ಈ ಕಟ್ಟಡಕ್ಕೆ ಗ್ರಾಮದ ದಾನಿಗಳು ಸಂಪೂರ್ಣವಾಗಿ ಸಹಕಾರ ನೀಡಿರುವುದು ಸಂತೋಷದ ವಿಷಯ. ಪೊಲೀಸ್ ಠಾಣಾ ಕೇಂದ್ರಗಳು ವಸೂಲಾತಿ ಕೇಂದ್ರಗಳಾಗದೆ ಯಾರೇ ತಪ್ಪು ಮಾಡಿದರು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕೆಂದರು. ಕೊಡಗು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಪೊಲೀಸ್ ಹಾಗೂ ಜನರ ನಡುವೆ ವಿಶ್ವಾಸ ಬೆಳೆಯಲು ಸಾಧ್ಯ. ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಅಗತ್ಯವಿದೆ. ಅಲ್ಲದೇ ಕರ್ತವ್ಯ ನಿಷ್ಠೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂದು ಕರೆನೀಡಿದರು.
ಕುಶಾಲನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಾಗುವುದೆಂದರು.
ಪೊಲೀಸ್ ಠಾಣೆಯ ನೂತನ ಕಟ್ಟಡದ ನವೀಕರಣಕ್ಕೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಲಾಯಿತು. ಠಾಣೆಯ ಮುಂಭಾಗದಲ್ಲಿ ಸಸಿಗಳನ್ನು ನೆಡಲಾಯಿತು.
ಕಾವೇರಿ ಸ್ವಚ್ಛತಾ ಅಂದೋಲನದ ಸಂಚಾಲಕ ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಸ್ವಾಗತಿಸಿದರು. ವೃತ್ತ ನಿರೀಕ್ಷಕರಾದ ಕ್ಯಾತೇಗೌಡ ವಂದನಾರ್ಪಣೆ ಸಲ್ಲಿಸಿಸರು. ಠಾಣಾ ಸಿಬ್ಬಂದಿ ಬಸವರಾಜ್ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕಿನ ಡಿವೈಎಸ್ಪಿ ಸಂಪತ್ತು ಕುಮಾರ್, ಕೊ.ಜಿ.ಕೃ.ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಜಿಪಂಸದಸ್ಯೆ ಮಂಜುಳಾ, ಎಸ್‌ಎಲ್‌ಎನ್ ಸಂಸ್ಥೆಯ ಮಾಲಕ ವಿಶ್ವನಾಥ್, ಕೊಡಗು ಅಪರಾಧ ದಳದ ರಂಗಪ್ಪ ಸೇರಿದಂತೆ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.