ಗುಡ್ಡಗಾಡಿನ ಬರಡು ಭೂಮಿಯಲ್ಲಿ ಬಂಗಾರ ಬೆಳೆಯುತ್ತಿರುವ ಎಲ್.ಸಿ.ಸೋನ್ಸ್

Update: 2016-10-31 18:15 GMT

ಮೂಡುಬಿದಿರೆಯಯಂಥ ಗುಡ್ಡಗಾಡಿನ ಬರಡು ಭೂಮಿಯಲ್ಲಿ ಬಂಗಾರ ಬೆಳೆಯುತ್ತಿರುವ ಎಲ್.ಸಿ.ಸೋನ್ಸ್ ಸಾಧನೆಗೆ ಇದೀಗ ಸುವರ್ಣ ಸಂಭ್ರಮ. ಪಿಎಚ್‌ಡಿ ಪದವೀಧರರಾಗಿ ಸರಕಾರಿ ಉದ್ಯೋಗಕ್ಕೆ ಜೋತು ಬೀಳದೇ, ಅನ್ನ ನೀಡುವ ನೆಲವನ್ನೇ ನಂಬಿ ಬದುಕು ಕಟ್ಟಿಕೊಂಡ ಅಪರೂಪದ ಕಾಯಕ ಜೀವಿ ಸೋನ್ಸ್. ನೂರಾರು ಕುಟುಂಬಗಳ ಬದುಕು ಕಟ್ಟಿಕೊಟ್ಟಿರುವ ಇವರು 1966ರಿಂದ ಪೂರ್ಣಾವಧಿ ಕೃಷಿಕ. ಕೃಷಿ-ತೋಟಗಾರಿಕೆ ಕ್ಷೇತ್ರದಲ್ಲಿ ಹತ್ತು ಹಲವು ಪ್ರಯೋಗ ಕೈಗೊಂಡು ಯಶಸ್ವಿಯಾಗಿರುವ ಇವರ ಸಾಧನೆಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. 50 ವರ್ಷಗಳಿಂದ ಕೃಷಿ ಯೋಗದ ವ್ರತ ಕೈಗೊಂಡಿರುವ ಈ ಸಾಧಕನ ಜೀವನ ಸಾಧನೆಯ ಕಿರುನೋಟ ಇಲ್ಲಿದೆ.

ಜೈವಿಕ ಕೃಷಿಗೆ ಹೊಸ ಭಾಷ್ಯ ಬರೆದಿರುವ ಮೂಡುಬಿದಿರೆಯ ಲಿವಿಂಗ್‌ಸ್ಟನ್ ಸಿ.ಸೋನ್ಸ್ ಹುಟ್ಟಿದ್ದು 1934ರಲ್ಲಿ, ಗ್ರಾಮೀಣ ಕೃಷಿ ಕುಟುಂಬದಲ್ಲಿ. ಇವರ ತಂದೆ ಎ.ಜಿ.ಸೋನ್ಸ್ ಅಲಹಾಬಾದ್ ಕೃಷಿ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಜಿಲ್ಲೆಯ ತೋಟಗಾರಿಕಾ ಪಿತಾಮಹ ಎನಿಸಿಕೊಂಡವರು.
ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದ ಸೋನ್ಸ್‌ರವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿ ಪಡೆದರು. ಮಂಗಳೂರಿನ ಸರಕಾರಿ ಶಿಕ್ಷಣ ಕಾಲೇಜಿನಿಂದ ಶಿಕ್ಷಕ ಪದವಿ ಪಡೆದು, ಮೂರು ವರ್ಷ ಕಾಲ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಬೋಧಿಸಿದರು. 1961ರಲ್ಲಿ ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು.
ಕುಟುಂಬದ ಜಮೀನಿನಲ್ಲಿ ಒಂದು ವರ್ಷ ಕೆಲಸ ಮಾಡಿದ ಇವರು ಅಮೆರಿಕದ ಪ್ರತಿಷ್ಠಿತ ಫುಲ್‌ಬ್ರೈಟ್ ಅನುದಾನವನ್ನು ಪಡೆದು ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಿದರು. 1966ರಲ್ಲಿ ಮೊಂಟಾನಾ ವಿವಿ ಇವರಿಗೆ ಡಾಕ್ಟರೇಟ್ ಪದವಿ ನೀಡಿತು. ವಿಶ್ವವಿದ್ಯಾನಿಲಯದಲ್ಲಿ ಸಸ್ಯಶಾಸ್ತ್ರ ಬೋಧನೆಯ ವೌಲಿಕ ಅನುಭವವನ್ನೂ ಅವರು ಪಡೆದರು. ಅಮೆರಿಕದಿಂದ ಹಿಂದಿರುಗುವ ವೇಳೆ ಇಂಗ್ಲೆಂಡಿನ ರೊಥಾಮಸ್ಟಡ್ ಹಾಗೂ ಹಾಲೆಂಡ್‌ನ ವೆಗಾನಿಂಗೆನ್ ಕೃಷಿ ಸಂಸ್ಥೆಗಳನ್ನು ಸಂದರ್ಶಿಸಿದರು.
ಬಳಿಕ ಅವರು ಸ್ವತಂತ್ರ ಜೀವನ ಬಯಸಿ ತಮ್ಮ ಕುಟುಂಬದ ಹೊಲದಲ್ಲೇ ಕಾಯಕ ಕೈಗೊಳ್ಳುವ ನಿರ್ಧಾರ ಕೈಗೊಂಡರು. ಅಲ್ಲಿ ಅವರ ತಂದೆ ಆಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಸರಕಾರಿ ಅಥವಾ ವಿಶ್ವವಿದ್ಯಾನಿಲಯದ ಕೆಲಸಕ್ಕಿಂತ ಕೃಷಿ ಕೆಲಸವೇ ಸೂಕ್ತ ಹಾಗೂ ಪರಿಣಾಮಕಾರಿ ಎನ್ನವುದು ಅವರ ನಂಬಿಕೆಯಾಗಿತ್ತು. ಇಂದು ಸೋನ್ಸ್ ಕುಟುಂಬ ಹೊಂದಿರುವ ಕೃಷಿಭೂಮಿಯಲ್ಲಿ ಮೊದಲು ಕೃಷಿ ಕಾರ್ಯ ಆರಂಭಿಸಿದ್ದು ಬಾಸೆಲ್ ಮಿಷನ್ ಜರ್ಮನ್ ಮಿಷಿನರಿ. ಗುಡ್ಡಗಾಡಿನ ಬಂಜರು ಭೂಮಿಯನ್ನು ತೋಟಗಾರಿಕೆಗೆ ಬಳಸಿಕೊಳ್ಳುವ ಪ್ರಾಯೋಗಿಕ ಕೃಷಿ ಪದ್ಧತಿಯನ್ನು ಇದು ಆರಂಭಿಸಿತ್ತು. 1966ರಿಂದೀಚೆಗೆ ಸೋನ್ಸ್ ತಮ್ಮ ಸಹೋದರ ಎಲ್.ವಿ.ಸೋಲ್ಸ್‌ರೊಂದಿಗೆ ಪೂರ್ಣಾವಧಿ ಕೃಷಿ ಮಾಡುತ್ತಿದ್ದಾರೆ.

ಮಿಶ್ರ ಬೆಳೆ ಮೂಲಕ ಕೃಷಿಯನ್ನು ಕಾರ್ಯಸಾಧು ಹಾಗೂ ಲಾಭದಾಯಕವಾಗಿ ಮಾಡುವುದು ಇವರ ಮುಖ್ಯ ಗುರಿ. ತೆಂಗು, ಕಾಳುಮೆಣಸು, ಅನಾನಸು, ಮಾವು, ವೆನಿಲ್ಲಾ ಮತ್ತಿತರ ಬೆಳೆಗಳು ಇವರ ಕ್ಷೇತ್ರದಲ್ಲಿ ಕಂಗೊಳಿಸುತ್ತವೆ. 1930ರ ದಶಕದಿಂದಲೂ ಅನಾಸನು ಪ್ರಮುಖ ಬೆಳೆ. ಇಲ್ಲಿಂದ ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ದೇಶದ ವಿವಿಧೆಡೆಗಳಿಗೆ ಅನಾನಸು ಸರಬರಾಜಾಗುತ್ತದೆ. ಗೇರು, ಕಾಳುಮೆಣಸು, ಬಾಳೆ, ಅಡಿಕೆ, ಬಾದಮ್ ಹಾಗೂ ಇತರ ಸಂಬಾರ ಪದಾರ್ಥಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ. ಆಲಂಕಾರಿಕ ಹಾಗೂ ಹಣ್ಣಿನ ಗಿಡಗಳ ನರ್ಸರಿ ಹಾಗೂ ಅಪರೂಪದ ಔಷಧೀಯ ಸಸ್ಯಗಳ ವನವೂ ಇದೆ. ಹೆಚ್ಚುವರಿ ಹಣ್ಣುಗಳ ರಸ ತೆಗೆಯುವ ಕ್ಯಾನಿಂಗ್ ಘಟಕ ಹಲವು ಗ್ರಾಮಸ್ಥರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ. ಸೋನ್ಸ್ ಫಾರಂನ ಮತ್ತೊಂದು ಮಹತ್ವದ ಸಾಧನೆಯೆಂದರೆ, ವಿಶ್ವದ ಬೇರೆ ಬೇರೆ ಪ್ರದೇಶಗಳ ಉಷ್ಣವಲಯದ ಬೆಳೆಗಳನ್ನು ಇಲ್ಲಿಗೆ ಪರಿಚಯಿಸುವ ಪ್ರಯತ್ನ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ರಂಬುಟಾನ್, ಮ್ಯಾಂಗೋಸ್ಟೀನ್, ದುರಿಯನ್, ಡ್ರೆಗಾನ್, ಮಲೇಶ್ಯ ಹಾಗೂ ಥಾಯ್ಲೆಂಡ್‌ನ ಲಂಗ್ಸಾತ್, ದಕ್ಷಿಣ ಅಮೆರಿಕದ ಎಗ್‌ಫ್ರೂಟ್, ಆಫ್ರಿಕಾದ ಕೋಲಾ ನಟ್, ಆಸ್ಟ್ರೇಲಿಯಾದ ಮಕಾಡಮಿಯಾ, ಬ್ರೆಝಿಲ್ ವಿವಿಧ ತಳಿಯ ಮರಗಳು, ಬರ್ಮಾದ ವಿವಿಧ ಜಾತಿಯ ಬಿದಿರು ಬೆಳೆಯುವ ಜನತೆಗೆ ಇವುಗಳನ್ನು ಜನ ಕೂಡಾ ಬೆಳೆಸುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ.
ಕೃಷಿ ಯಾಂತ್ರೀಕರಣ ಮತ್ತು ಸುಧಾರಿತ ನೀರಾವರಿ ವ್ಯವಸ್ಥೆ ಇನ್ನೊಂದು ಎದ್ದು ಕಾಣುವ ಪ್ರಯತ್ನ. ಸೋನ್ಸ್ 1986ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಕೃಷಿ ವಿಧಾನವನ್ನು ತಿಳಿದುಕೊಂಡರು. ಮಿತವಾದ ಜಲಸಂಪನ್ಮೂಲ ಬಳಸಿಕೊಂಡು ಕೃಷಿ ಮಾಡುವ ಅಲ್ಲಿನ ವಿಧಾನವನ್ನು ಸೋನ್ಸ್ ಫಾರಂನಲ್ಲಿ ಅಳವಡಿಸಿಕೊಳ್ಳಲಾಗಿದೆ.
ಕೃಷಿ ಹಾಗೂ ಗ್ರಾಮೀಣ ಕಲಾ ವಸ್ತು ಸಂಗ್ರಹಾಲಯ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ. ಪಶ್ಚಿಮ ಘಟ್ಟದ ವೈವಿಧ್ಯಮಯ ಸಸ್ಯ ಸಂಪತ್ತಿನ ಆರ್ಥಿಕ ಮಹತ್ವವನ್ನು ಇದು ಬಿಂಬಿಸುತ್ತದೆ. ಕೃಷಿಕ್ಷೇತ್ರದ ಒಂದು ಭಾಗವನ್ನು ಜೈವಿಕ ಕೃಷಿಗೇ ಮೀಸಲಿಡಲಾಗಿದೆ. ಕಾಫಿ, ಅಡಿಕೆ ಹಾಗೂ ಏಲಕ್ಕಿ ಬೆಳೆಯ ಜತೆಗೆ ಪಶ್ಚಿಮ ಘಟ್ಟದ ವಿವಿಧ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಸಲು 800 ಮೀಟರ್ ಎತ್ತರದಲ್ಲಿ ವಿಶೇಷ ಭೂಮಿಕೆ ಸಿದ್ಧಪಡಿಸಲಾಗಿದೆ. ಒಟ್ಟು 170 ಪ್ರಭೇದಗಳ ಸಸ್ಯಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.


ಸೋನ್ಸ್ ಫಾರ್ಮ್, ವಿದ್ಯಾರ್ಥಿಗಳು, ರೈತರು, ಕೃಷಿ ತಜ್ಞರ ಆಕರ್ಷಕ ಪ್ರವಾಸಿ ತಾಣ ಹಾಗೂ ಶೈಕ್ಷಣಿಕ ಪ್ರವಾಸಿಗಳನ್ನು ಕೈಬೀಸಿ ಕರೆಯುವ ಕೇಂದ್ರವಾಗಿ ಮಾರ್ಪಟ್ಟಿದೆ. ವಿದೇಶಿಯರೂ ಇಲ್ಲಿಗೆ ಅಧ್ಯಯನ ಭೇಟಿ ಕೈಗೊಳ್ಳುತ್ತಾರೆ. ಸೋನ್ಸ್ ಹಲವು ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸೋನ್ಸ್ ಅವರ ನಾಲ್ವರು ಮಕ್ಕಳ ಪೈಕಿ ಒಬ್ಬರು ಕೃಷಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕುಟುಂಬದ ಸಾಂಪ್ರದಾಯಿಕ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪತೊಟ್ಟಿದ್ದಾರೆ. ಇದಕ್ಕಾಗಿ ಉತ್ತರ ಆಸ್ಟ್ರೇಲಿಯಾದಲ್ಲಿ ವಿಶೇಷ ತರಬೇತಿಯನ್ನೂ ಪಡೆದು ಬಂದಿದ್ದಾರೆ. ಸಾಲು ಸಾಲು ಪ್ರಶಸ್ತಿಗಳು ಸೋನ್ಸ್ ಸಾಧನೆಯನ್ನು ಅರಸಿಕೊಂಡು ಬಂದಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ, ಸಿಂಡಿಕೇಟ್ ಬ್ಯಾಂಕ್‌ನ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಉತ್ತಮ ರೈತ ಪ್ರಶಸ್ತಿ, ರಾಜ್ಯ ಸರಕಾರದಿಂದ ಉತ್ತಮ ತೋಟಗಾರಿಕಾ ಪ್ರಶಸ್ತಿ ಇವುಗಳಲ್ಲಿ ಕೆಲವು.

 ಮಳೆನೀರು ಕೊಯ್ಲಿಗಾಗಿ 15 ಎಕರೆ ವಿಶಾಲವಾದ ಕೆರೆ ಪುನರುಜ್ಜೀವನ, ಅರಣ್ಯೀಕರಣ, ಮನೋರಂಜನಾ ಹಾಗೂ ಪಕ್ಷಿಧಾಮ, ಮೀನುಗಾರಿಕೆ ಅಭಿವೃದ್ಧಿಯಂಥ ಕಾರ್ಯಗಳನ್ನೂ ಸೋನ್ಸ್ ಕೈಗೊಂಡಿದ್ದಾರೆ. ಎನರ್ಜಿ ಹೀಲಿಂಗ್ ವಿಧಾನದ ಮೂಲಕ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳನ್ನು ಗುಣಪಡಿಸುವ ನಿಟ್ಟಿನಲ್ಲೂ ಸೋನ್ಸ್ ಫಾರ್ಮ್ ಪ್ರಯೋಗ ನಡೆಸುತ್ತಿದೆ. ಡೌಸಿಂಗ್, ಪಿರಮಿಡ್, ನೇಟಿವ್ ಅಮೆರಿಕನ್ ಮೆಡಿಸಿನ್ ವ್ಹೀಲ್ ಆ್ಯಂಡ್ ಲೆಬಿರಿಂಥ್ಸ್ ಪ್ರಯೋಗಗಳು ಇವುಗಳಲ್ಲಿ ಪ್ರಮುಖವಾದವು. ಕೃಷಿ ಹಾಗೂ ಪರಿಸರ ಅಧ್ಯಯನಕ್ಕೆ ಬರುವವರ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಿಸುವ ಯೋಚನೆಯೂ ಸೋನ್ಸ್ ಅವರಿಗಿದೆ. ಕೃಷಿ ತ್ಯಾಜ್ಯಗಳಿಂದ ಉತ್ಪಾದನೆಯಾಗುವ ಮಿಥೇನ್‌ನಿಂದ ವಿದ್ಯುತ್ ಉತ್ಪಾದಿಸುವ ಹಾಗೂ ಸೌರವಿದ್ಯುತ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲೂ ಗಮನ ಹರಿಸಿದ್ದಾರೆ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News