×
Ad

ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಿ: ಸಚಿವ ಸೀತಾರಾಮ್

Update: 2016-11-01 22:13 IST

 ಮಡಿಕೇರಿ, ನ.1: ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಂತೆ ನಾಡು ನುಡಿಗಾಗಿ ನಾವೆಲ್ಲ ಬದ್ಧತೆಯಿಂದ ಶ್ರಮಿಸಿ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಪ್ರತಿ ಮನೆ-ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕನ್ನಡವನ್ನು ಕ್ರಮಬದ್ಧವಾಗಿ ಓದುವ, ಬರೆಯುವ ಕೌಶಲ್ಯ ರೂಢಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಕ್ರೆಡಾಂಗಣದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿದ ಅವರು, ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಲಭ್ಯತೆ, ಎಂಟು ಜ್ಞಾನಪ್ರಶಸ್ತಿ ಸಂದಿರುವುದು ಕನ್ನಡ ಭಾಷೆಗಿರುವ ಮಹತ್ವದ ಹಿರಿಮೆಯಾಗಿದೆ ಎಂದು ಬಣ್ಣಿಸಿದರು. ರಾಜ್ಯ ಇಂದು ಅಭಿವೃದ್ಧಿಯ ಮುಂಚೂಣಿ ಯಲ್ಲಿರುವುದು ಹೆಮ್ಮೆಯ ವಿಚಾರ ಎಂದ ಅವರು, ಸ್ವಾತಂತ್ರಾ ನಂತರ ರಾಜ್ಯವು ಕಲೆ, ಸಂಸ್ಕೃತಿ ಆರೋಗ್ಯ, ಮೂಲಭೂತ ಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿದೆ. ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ರೈತಾಪಿ ವರ್ಗದ, ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ಎರಡು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ, ಜಿಲ್ಲೆಯಲ್ಲಿ ಅಂದಾಜು 13 ವಾರಗಳಿಗೆ 50,414 ಮೆ.ಟನ್ ಮೇವಿನ ಲಭ್ಯತೆ ಇದ್ದು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿಲ್ಲ. ಮಹಶೀರ್ ಮೀನುಮರಿಗಳ ಉತ್ಪಾದನೆಗೆ ಮೀಸಲಿಟ್ಟಿರುವ ಹಾರಂಗಿಯಲ್ಲಿ ರಾಜ್ಯದ ಏಕೈಕ ಉತ್ಪಾದನಾ ಕೇಂದ್ರ ವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಿಸಲಾದ ಆರೋಗ್ಯ ಕವಚ ನಗು-ಮಗು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ಅನ್ವಯ 17,001 ಫಲಾನುಭವಿಗಳ 87.29 ಲಕ್ಷ ರೂ. ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ವಿದ್ಯಾಸಿರಿ ಎಂಬ ನೂತನ ಯೋಜನೆ ಮತ್ತು ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

  ಜಿಲ್ಲಾ ಸಶಸ್ತ್ರಪಡೆ, ಪೊಲೀಸ್, ಎನ್‌ಸಿಸಿ, ಗೃಹರಕ್ಷಕದಳ, ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಗಳ ಪಥಸಂಚಲನದ ಪರಿವೀಕ್ಷಣೆ ನಡೆಸಿದ ಸಚಿವರು ವಂದನೆ ಸ್ವೀಕರಿಸಿದರು. ಪಥಸಂಚಲನದಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಸಮಾರಂಭದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಲ್ಯಾಪ್‌ಟಾಪ್ ವಿತರಣೆ: 

 ಇದೇ ಸಂದರ್ಭ ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದವರನ್ನು ಗೌರವಿಸಲಾಯಿತು. ಸರಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ 9ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಬಹುಮಾನ ನೀಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತರಲಾದ ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಕೈಪಿಡಿ ಹಾಗೂ ವಿಶೇಷ ಸಂಚಿಕೆಯನ್ನು ಸಚಿವರು ಇದೇ ಸಂದರ್ಭ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ನಗರಸಭಾಧ್ಯಕ್ಷೆ ಕಾವೇರಮ್ಮ, ಮಾಜಿ ಸಚಿವ ನಾಣಯ್ಯ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ, ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಪ್ರಮುಖ ಮಿಟ್ಟು ಚೆಂಗಪಜ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News