ಕನ್ನಡ ದಿನಪತ್ರಿಕೆ ಹಂಚಿ ವಿನೂತನವಾಗಿ ರಾಜ್ಯೋತ್ಸವ ಆಚರಣೆ
ಕಡೂರು, ನ.1: ಶಾಸಕ ವೈ.ಎಸ್.ವಿ. ದತ್ತ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಕಡೂರು ಪಟ್ಟಣದ 4 ಮತ್ತು 5ನೆ ವಾರ್ಡ್ ಹಾಗೂ ರಾಷ್ಟ್ರೀಯ ಹೆದ್ದಾರಿ 206ರ ಮನೆ, ಅಂಗಡಿಗಳಿಗೆ ತೆರಳಿ ಕನ್ನಡ ದಿನ ಪತ್ರಿಕೆಗಳನ್ನು ಹಂಚುವ ಮೂಲಕ ವಿನೂತನ ವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಂತರ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಯುವಕರನ್ನು ಹಾದಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಯುವಕರು ಪ್ರಚೋದನೆ ಹಾಗೂ ಉನ್ಮಾದಕ್ಕೆ ಒಳಗಾಗುತ್ತಿದ್ದಾರೆ.ಆತಂಕಕಾರಿ ಸಂಗತಿ ಮೂಡುತ್ತಿದೆ. ಕನ್ನಡದ ಉತ್ಸವಗಳು ಕಳೆಗುಂದುವಂತಾಗಿದೆ. ಇದು ದೊಡ್ಡ ದುರಂತ. ಯುವಕರು ಕೆಟ್ಟ ಚಾಳಿಗೆ ಬಲಿಯಾಗದೆ ಓದುವ ಹವ್ಯಾಸದತ್ತ ಗಮನಹರಿಸಬೇಕಿದೆ ಎಂದು ಹೇಳಿದರು.
ಪತ್ರಿಕೆಗಳ ಬಗ್ಗೆ ರಾಜಕಾರಣಿಗಳಿಗೆ ಭಯ ಇಲ್ಲದಂತಾಗಿದೆ. ಹಿಂದಿನ ಕಾಲದ ಗುಣಮಟ್ಟವನ್ನು ಪತ್ರಿಕೆಗಳು ಉಳಿಸಿಕೊಂಡಿಲ್ಲ. ಆರೋಗ್ಯಕರ ಪ್ರಯೋಗಗಳು ನಡೆಯಬೇಕಿದೆ ಎಂದು ತಿಳಿಸಿದರು.
ಪತ್ರಿಕೆ ಹಂಚುವ ಕಾರ್ಯದಲ್ಲಿ ಜಿಪಂ ಸದಸ್ಯ ಕಾವೇರಿ ಲಕ್ಕಪ್ಪ, ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ವೈ.ಎಸ್. ರವಿಪ್ರಕಾಶ್, ಬಿಳಿಗಿರಿ ವಿಜಿ, ಕೆ.ಎಚ್. ಲಕ್ಕಪ್ಪ, ತನ್ವೀರ್ ಅಹ್ಮದ್, ಸೀಗೆಹಡ್ಲು ಹರೀಶ್, ಕೆ.ಜಿ.ಶ್ರೀನಿವಾಸಮೂರ್ತಿ, ಯಗಟಿ ರಂಗಪ್ಪ ಮತ್ತಿತರರು ಭಾಗವಹಿಸಿದ್ದರು.